ಬೆಂಗಳೂರು,ಆ.27-ಬಿಬಿಎಂಪಿ ಮುಖ್ಯ ಅಭಿಯಂತರರು ಪಿಎಂಸಿ ಹೆಸರಿನಲ್ಲಿ ಗುತ್ತಿಗೆದಾರರಿಂದ ಕೋಟಿ ಕೋಟಿ ಹಣ ಲಪಟಾಯಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ಮುಖಂಡ ಎನ್.ಅರ್.ರಮೇಶ್ ಅವರು ಇಡಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ಪ್ರತಿಯೊಂದು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರೋಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ( ಪಿಎಂಸಿ) ಕಾರ್ಯವನ್ನು ಸಂಬಂಧಪಟ್ಟ ಆಯಾ ಮುಖ್ಯ ಅಭಿಯಂತರರುಗಳೇ ಕಾನೂನು ಬಾಹಿರವಾಗಿ ನಿರ್ವಹಿಸುತ್ತಿದ್ದಾರೆ ಎಂದು ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ಗಿರಿನಾಥ್ ಹಾಗೂ ಆಡಳಿತಾಧಿಕಾರಿ ಉಮಾಶಂಕರ್ ಅವರಿಗೆ ದೂರು ನೀಡಿದ್ದಾರೆ.
ಪ್ರತಿಯೊಂದು ಕಾಮಗಾರಿಯ ಒಟ್ಟು ಮೊತ್ತದ ಶೇ. 02% ರಷ್ಟು ಮೊತ್ತವನ್ನು ಪಿಎಂಸಿ ಹೆಸರಿನಲ್ಲಿ ಕಡಿತಗೊಳಿಸುವ ಮುಖ್ಯ ಅಭಿಯಂತರರುಗಳು ಅಂತಹ ಎಲ್ಲಾ ಕಾರ್ಯಗಳನ್ನು ತಮ ಸಂಬಂಧಿಕರು, ಬೆಂಬಲಿಗರು ಇಲ್ಲವೇ ಹಿಂಬಾಲಕರ ಮೂಲಕವೇ ನಡೆಸುತ್ತಾ, ಪ್ರತಿಯೊಂದು ಕಾಮಗಾರಿಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕೊಳ್ಳೆ ಹೊಡೆಯುತ್ತಿರುವುದು ನಿಮ ಗಮನಕ್ಕೆ ಬಂದಿಲ್ಲವೇ ಎಂದು ಅವರು ಆಯುಕ್ತರು ಹಾಗೂ ಆಡಳಿತಾಧಿಕಾರಿ ಉಮಾಶಂಕರ್ ಅವರನ್ನು ಪ್ರಶ್ನಿಸಿದ್ದಾರೆ.
ಪ್ರತಿಯೊಂದು ಕಾಮಗಾರಿಯ ಪಿಎಂಸಿ ಏಜೆನ್ಸಿಗಳನ್ನು ನಿಗದಿ ಮಾಡುವ ಸಂಬಂಧ ನಿಯಮಾನುಸಾರ ಟೆಂಡರ್ ಹಾಗೂ ಕೊಟೇಷನ್ಗಳ ಮೂಲಕ ಅರ್ಹ ಸಂಸ್ಥೆಗಳಷ್ಟೇ ಪಿಎಂಸಿ ಕಾರ್ಯಾದೇಶ ಪತ್ರಗಳನ್ನು ನೀಡಬೇಕಿರುತ್ತದೆ. ಪಿಎಂಸಿ ಮೊತ್ತ ಐದು ಲಕ್ಷಕ್ಕಿಂತ ಹೆಚ್ಚಿದ್ದರೆ ಟೆಂಡರ್ ಆಹ್ವಾನಿಸಿದ ನಂತರ ಅರ್ಹರಿಗೆ ಪಿಎಂಸಿ ಕಾರ್ಯದ ಕಾರ್ಯಾದೇಶ ಪತ್ರ ನೀಡಬೇಕಿರುತ್ತದೆ.
ಆದರೆ, ಕಾನೂನು ರೀತ್ಯಾ ನಿರ್ವಹಿಸಬೇಕಾದ ಈ ಕಾರ್ಯದಲ್ಲಿ ತಮ ಸಂಬಂಧಿಕರು, ಹಿಂಬಾಲಕರು ಇಲ್ಲವೇ ಅನುಯಾಯಿಗಳನ್ನು ಹೊರತುಪಡಿಸಿ ಬೇರೆ ಯಾವ ಏಜಿನ್ಸಿಗಳು ಈ ಕಾರ್ಯದಲ್ಲಿ ಭಾಗಿಯಾಗದಂತೆ ಮುಖ್ಯ ಅಭಿಯಂತರರು ನೋಡಿಕೊಳ್ಳುತ್ತಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ವರ್ಷ ಒಂದಕ್ಕೆ ಕನಿಷ್ಠ 04 ಸಾವಿರದಿಂದ 05 ಸಾವಿರ ಕೋಟಿ ರೂಪಾಯಿಗಳಷ್ಟು ಮೊತ್ತದ ಅಭಿವದ್ಧಿ ಕಾಮಗಾರಿಗಳು ನಡೆಯುತ್ತಿದ್ದು, 80 ಕೋಟಿಯಿಂದ 100 ಕೋಟಿ ರೂಪಾಯಿಗಳಷ್ಟು ಮೊತ್ತ ಕೇವಲ ಪಿಎಂಸಿ ಹೆಸರಿನಲ್ಲಿ ಸಂಬಂಧಪಟ್ಟ ಆಯಾ ಮುಖ್ಯ ಅಭಿಯಂತರರುಗಳ ಜೇಬು ಸೇರುತ್ತಿದೆ.
ಬಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿ ಬಿಲ್ಲುಗಳನ್ನು ಪಾವತಿ ಮಾಡುವಲ್ಲಿ ಹೆಚ್ಚಿನ ಆರ್ಥಿಕ ಶಿಸ್ತು ಹಾಗೂ ಪಾರದರ್ಶಕತೆಯನ್ನು ತರುವ ದಷ್ಟಿಯಿಂದ ಹಿಂದಿನ ಆಯುಕ್ತರು ಪಿಎಂಸಿ ಪದ್ಧತಿಯನ್ನು ಜಾರಿಗೆ ತರಲು ಆದೇಶಿಸಿರುತ್ತಾರೆ.
ಅಂದಿನ ಆಯುಕ್ತರ ಈ ಆದೇಶವು ಕೆಲವು ಭ್ರಷ್ಟ ಮುಖ್ಯ ಅಭಿಯಂತರರುಗಳಿಗೆ ವರದಾನವಾಗಿ ಪರಿಣಮಿಸಿದ್ದು, ಅದನ್ನೇ ತಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಅಪಾರ ಪ್ರಮಾಣದ ಹಣವನ್ನು ಕಾನೂನು ಬಾಹಿರವಾಗಿ ಲೂಟಿ ಮಾಡಲಾಗುತ್ತಿದೆ.
2018ರಲ್ಲಿ ಪಿಎಂಸಿ ಪದ್ಧತಿ ಜಾರಿಗೆ ತರುವ ಆದೇಶವನ್ನು ಆಯುಕ್ತರು ಜಾರಿ ಮಾಡಿದ ನಂತರ ಇದುವರೆವಿಗೆ ಸುಮಾರು 500 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಅದೇ ಪದ್ಧತಿ ಅಡಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಪೈಕಿ ಶೇ. 90% ರಷ್ಟು ಹಣವನ್ನು ನಾಲ್ಕೈದು ಪ್ರಾಮಾಣಿಕ ಮುಖ್ಯ ಅಭಿಯಂತರರುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಮುಖ್ಯ ಅಭಿಯಂತರರುಗಳು ತಮ ರಕ್ತ ಸಂಬಂಧಿಕರುಗಳಿಗೆ, ಹಿಂಬಾಲಕರಿಗೆ, ಮತ್ತು ಅನುಯಾಯಿಗಳಿಗೆ ನಿಯಮಬಾಹಿರವಾಗಿ ಪಿಎಂಸಿ ಪದ್ಧತಿಯ ಟೆಂಡರ್ ಗಳನ್ನು ಮಾಡಿಕೊಟ್ಟಿದ್ದಾರೆ ಎಂದು ರಮೇಶ್ ಗಂಭೀರ ಆರೋಪ ಮಾಡಿದ್ಧಾರೆ.
ಕಳೆದ ಹತ್ತು ವರ್ಷಗಳಿಂದ ಇಂತಹ ಕಾನೂನು ಬಾಹಿರ ಕಾರ್ಯದಲ್ಲಿ ತೊಡಗಿಕೊಂಡಿರುವ ಎಲ್ಲಾ ಮುಖ್ಯ ಅಭಿಯಂತರರುಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳುವುದರ ಜೊತೆಗೆ, ಈ ಬಹತ್ ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ.