ಬೆಂಗಳೂರು, ಮಾ.29-ಬಿಬಿಎಂಪಿ ಕಸದ ಲಾರಿಯೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ವರ್ಷದ ಬಾಲಕ ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಸ್ಥಳಿಯರು ಲಾರಿಗೆ ಬೆಂಕಿಹಚ್ಚಿದ ಘಟನೆ ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಥಣಿಸಂದ್ರ ಮುಖ್ಯ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ಇಂದು ಮಧ್ಯಾಹ್ನ 1.30 ರ ಸುಮಾರಿನಲ್ಲಿ ತಮ್ಮ ಮಗನನ್ನು ದ್ವಿಚಕ್ರವಾಹನದಲ್ಲಿ ಕರೆದುಕೊಂಡು ತಂದೆ ಹೊಗುತ್ತಿದ್ದಾಗ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಲಾರಿ ಇವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ.
ಪರಿಣಾಮ ತಂದೆ ಹಾಗೂ ಮಗ ರಸ್ತೆಗೆ ಉರುಳಿ ಬಿದ್ದಿದ್ದಾರೆ. ಗಂಭೀರ ಪೆಟ್ಟಾಗಿ ಬಾಲಕ ಮೃತಪಟ್ಟಿದ್ದಾನೆ. ತಂದೆ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಲಕ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ಸ್ಥಳಿಯರು ಕಸದ ಲಾರಿಗೆ ಬೆಂಕಿ ಹಚ್ಚಿದ್ದಾರೆ.
ಸುದ್ದಿ ತಿಳಿದು ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದಾಗಿ ಲಾರಿ ಶೇ. 40 ರಷ್ಟು ಸುಟ್ಟು ಹಾನಿಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.