ಬೆಂಗಳೂರು,ಫೆ.24- ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಆದೇಶ ಪಾಲಿಸದೆ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮಹದೇವಪುರ ವಲಯದ ಹಿರಿಯ ಆರೋಗ್ಯ ಪರಿವೀಕ್ಷಕ ಕೆ.ಎಲ್.ವಿಶ್ವನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ವಾಣಿಜ್ಯ ಮಳಿಗೆಗಳ ಮೇಲೆ ಹಾಕಲಾಗುವ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಗೆ ಪ್ರಾಶಸ್ತ್ರ ನೀಡಬೇಕು ಒಂದು ವೇಳೆ ಈ ನಿಯಮ ತಪ್ಪುವ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಅನ್ಯಭಾಷೆಯಲ್ಲಿರುವ ಫಲಕಗಳನ್ನು ಬಟ್ಟೆಯಿಂದ ಮುಚ್ಚಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶ ಹೊರಡಿಸಿದ್ದರು.
ಕನ್ನಡ ಅನುಷ್ಠಾನ ಜಾರಿಗೊಳಿಸದ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಆಯಾ ವಲಯಗಳ ಹಿರಿಯ ಆರೋಗ್ಯ ಪರಿವೀಕ್ಷಕರಿಗೆ ನೀಡಲಾಗಿತ್ತು. ಆದರೆ, ಮಹದೇವಪುರ ವಲಯದ ಹಿರಿಯ ಆರೋಗ್ಯ ಪರಿವೀಕ್ಷಕ ವಿಶ್ವನಾಥ್ ಅವರು ಆಯುಕ್ತರ ಆದೇಶಕ್ಕೂ ಕಿಮ್ಮತ್ತು ನೀಡದೆ ಬೇಜವಬ್ದಾರಿತನ ಪ್ರದರ್ಶಿಸಿರುವುದು ಕಂಡು ಬಂದಿದೆ.
ಮಂಡ್ಯ ಕ್ಷೇತ್ರದಿಂದ ಸುಮಲತಾ ಕಣಕ್ಕೆ ಇಳಿಯುವುದು ಫಿಕ್ಸ್..!
ವಿಶ್ವನಾಥ್ ಅವರ ಈ ಬೇಜವಬ್ದಾರಿತನವನ್ನು ಗಂಭೀರವಾಗಿ ಪರಿಗಣಿಸಿರುವ ಮಹದೇವಪುರ ವಲಯ ಜಂಟಿ ಆಯುಕ್ತರು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಆದೇಶದ ಮೇರೆಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡಿರುವ ವಿಶ್ವನಾಥ್ ಅವರಿಗೆ ಕೆಸಿಎಸ್‍ಆರ್ ನಿಯಮದಂತೆ ಜೀವಾನಾಧರ ಭತ್ಯೆ ನೀಡಬೇಕು ಹಾಗೂ ಅವರು ಕೇಂದ್ರ ಸ್ಥಾನಬಿಟ್ಟು ಬೇರೆಡೆಗೆ ತೆರಳದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ವೈದ್ಯಾಧಿಕಾರಿಗಳಿಗೆ ಜಂಟಿ ಆಯುಕ್ತರು ಸೂಚನೆ ನೀಡಿದ್ದಾರೆ.