ಬೆಂಗಳೂರು,ಜ.16– ಸಾಕುಪ್ರಾಣಿಗಳು ಹಾಗೂ ಮಾನವರ ನಡುವೆ ಸಾಮರಸ್ಯ ಹಾಗೂ ಅರಿವು ಮೂಡಿಸಲು ಬಿಬಿಎಂಪಿ ವಿನೂತನ ಕಾರ್ಯಕ್ರಮ ಹಮಿಕೊಂಡಿದೆ. ಬೀದಿನಾಯಿಗಳು, ಹಸು, ಬೆಕ್ಕು ಸೇರಿದಂತೆ ಮುಂತಾದ ಪ್ರಾಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಉದಾಸೀನ ಭಾವನೆ ತೋರುತ್ತಿದ್ದು, ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿದೆ. ನಾವು ಅವುಗಳಿಗೆ ಪ್ರೀತಿ ತೋರುವುದನ್ನು ಬಿಟ್ಟು ಅವುಗಳಿಗೆ ಬೆದರಿಸುವುದು ಮಾಡಿದರೆ ತಿರುಗಿ ಬೀಳುತ್ತವೆ. ಪ್ರೀತಿ ತೋರಿದರೆ ಅವು ಸಹ ಮಾನವರ ಮೇಲೆ ಎರಗುವುದಿಲ್ಲ ಎಂದು ವಿಶೇಷ ಆಯುಕ್ತ ವಿಕಾಸ ಸೂರಳ್ಕರ್ ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿಂದು ಪಶುಪಾಲನ ವಿಭಾಗದಿಂದ ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕರ ಆರೋಗ್ಯ ಶೀರ್ಷಿಕೆಯಡಿ ಸಮುದಾಯ ಪ್ರಾಣಿಗಳ ಸಹಬಾಳ್ವೆ ಮೂಡಿಸುವ ನಿಟ್ಟಿನಲ್ಲಿ ಹಮಿಕೊಂಡಿದ್ದ ಜಾಗೃತಿ ಹಾಗೂ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಯಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ. ಅವುಗಳಿಗೆ ನಿಗದಿತ ಸ್ಥಳದಲ್ಲಿ ಆಹಾರ ಸೌಲಭ್ಯ ಕಲ್ಪಿಸಿದರೆ, ಪ್ರೀತಿ ತೋರಿದರೆ ಅವು ಮಾನವರ ಮೇಲೆ ಎರಗುವುದಿಲ್ಲ. ಅದನ್ನು ಬಿಟ್ಟು ಅವುಗಳ ಜೊತೆ ಸಂಘರ್ಷಕ್ಕಿಳಿದರೆ ಮಾನವರ ಮೇಲೆ ಎರಗುತ್ತವೆ ಎಂದರು.
ಸಾಕು ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದಲ್ಲಿ ವ್ಯಾಪಕ ಅಭಿಯಾನ ಹಮಿಕೊಂಡಿದ್ದು, ವಲಯವಾರು ಬೀದಿನಾಟಕ ನೃತ್ಯರೂಪಕದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಯಾವುದೇ ಪ್ರಾಣಿಗಳಾಗಲಿ ಏಕಾಏಕಿ ತಿರುಗಿ ಬೀಳುವುದಿಲ್ಲ. ನಾವು ಅವುಗಳಿಗೆ ತೊಂದರೆ ನೀಡಿದರೆ ಮಾತ್ರ ತೊಂದರೆ ನೀಡುತ್ತವೆ. ಪ್ರೀತಿ ತೋರಿದರೆ ಅವುಗಳ ಸಹ ನಮೊಂದಿಗೆ ಪ್ರೀತಿಯಿಂದ ವರ್ತಿಸುತ್ತವೆ. ಈ ನಿಟ್ಟಿನಲ್ಲಿ ನಗರದ ಆಯ್ದ ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡಿದರೆ ಮುಂದಿನ ದಿನಗಳಲ್ಲಿ ಬೀದಿನಾಯಿಗಳ ದಾಳಿ ನಿಯಂತ್ರಣಕ್ಕೆ ಬರಲಿದೆ ಎಂದರು. ಪಶುಪಾಲನ ವಿಭಾಗದ ಜಂಟಿ ನಿರ್ದೇಶಕ ಡಾ.ಚಂದ್ರಯ್ಯ, ವಲಯ ಸಹಾಯಕ ನಿರ್ದೇಶಕರು ಸೇರಿದಂತೆ ಮತ್ತಿತರರು ಇದ್ದರು.