ಬೆಂಗಳೂರು, ಆ.23– ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆಗಾಗಿ ಆಯಾ ವಲಯ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೇಂದ್ರ ಕಚೇರಿ ಸಭಾಂಗಣದಲ್ಲಿಂದು ಗಣೇಶ ಚತುರ್ಥಿ ಆಚರಣೆ ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಸಿದ್ಧತೆಗಳ ಜತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಗಣೇಶಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿ ನೀಡುವ ಸಲುವಾಗಿ 63 ಉಪವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಕೂಡಲೇ ತೆರೆದು ಪಾಲಿಕೆ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳನ್ನು ತ್ವರಿತವಾಗಿ ನಿಯೋಜಿಸಬೇಕು. ಬಳಿಕ ಅಧಿಕಾರಿಗಳ ಮಾಹಿತಿಯುಳ್ಳ ಪಟ್ಟಿಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅನುಮತಿ ಕೋರಿ ಬರುವವರಿಗೆ ಕಾಲಮಿತಿಯೊಳಗೆ ಅನುಮತಿ ನೀಡುವಂತೆ ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು.
ಕೆರೆಗಳ ಬಳಿ ಇರುವ ಕಲ್ಯಾಣಿಗಳನ್ನು ಸಂಪೂರ್ಣ ಸ್ವಚ್ಛ ಮಾಡಬೇಕು. ಮೂರ್ತಿಗಳ ವಿಸರ್ಜನೆಗಾಗಿ ಅಗತ್ಯ ಸಿಬ್ಬಂದಿಗಳ ನಿಯೋಜನೆ, ಬ್ಯಾರಿಕೇಡ್, ಸಿಸಿ ಕ್ಯಾಮೆರಾ, ವಿದ್ಯುತ್ ದೀಪ, ನುರಿತ ಈಜುಗಾರರು ಹಾಗೂ ಕ್ರೇನ್ ಸೌಲಭ್ಯ ಕಲ್ಪಿಸಬೇಕೆಂದು ಸೂಚಿಸಿದರು.
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿದ್ಯುತ್ ತಂತಿಗಳನ್ನು ಪರಿಶೀಲಿಸಿ ಎಲ್ಲಿಯೂ ಕೂಡ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ರಸ್ತೆ ಬದಿಯ ವಿದ್ಯುತ್ ಕಂಬಗಳಲ್ಲಿ ದೀಪಗಳು ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಗುಂಡಿಬಿದ್ದ ರಸ್ತೆಗಳನ್ನು ಗುರುತಿಸಿ ಕೂಡಲೇ ಮುಚ್ಚಬೇಕೆಂದು ತಿಳಿಸಿದರು.
ಆ್ಯಂಬುಲೆನ್ಸ್ /ಅಗ್ನಿಶಾಮಕ ವಾಹನ ವ್ಯವಸ್ಥೆ:
ಗಣೇಶ ವಿಸರ್ಜನೆ ಮಾಡುವ ಕಲ್ಯಾಣಿಗಳ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ವಿಸರ್ಜನೆ ವೇಳೆ ಅವಘಡಗಳು ಸಂಭವಿಸಿದರೆ ಪ್ರಥಮ ಚಿಕಿತ್ಸೆ ನೀಡುವ ಸಲುವಾಗಿ ಆರೋಗ್ಯ ಸಿಬ್ಬಂದಿಗಳ ನಿಯೋಜನೆ ಹಾಗೂ ಅಗ್ನಿಶಾಮಕ ದಳದ ವಾಹನಗಳನ್ನು ಸುಸ್ಥಿತಿಯಲ್ಲಿಡುವಂತೆ ಸೂಚಿಸಿದರು.
ಡ್ರಸ್‌ಕೋಡ್:
ಕೆರೆ ಹಾಗೂ ಕಲ್ಯಾಣಿಗಳ ಬಳಿ ಗಣೇಶಮೂರ್ತಿಗಳ ವಿಸರ್ಜನೆ ಮಾಡುವ ವೇಳೆ ಇಲಾಖಾವಾರು ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಡ್ರಸ್‌ಕೋಡ್ ನೀಡಬೇಕು. ಜತೆಗೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಹೋಮ್‌ಗಾರ್ಡ್‌ಗಳನ್ನು ನಿಯೋಜನೆ ಮಾಡಬೇಕೆಂದು ಸೂಚಿಸಿದರು.
ಮೊಬೈಲ್ ಟ್ಯಾಂಕ್ ವ್ಯವಸ್ಥೆ:
ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುವ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಲುವಾಗಿ ಆಯಾಯ ವಾರ್ಡ್ ವ್ಯಾಪ್ತಿಗಳಲ್ಲಿ ಬರುವ ಪ್ರಮುಖ ಸ್ಥಳ, ಜಂಕ್ಷನ್‌ಗಳಲ್ಲಿ ತಾತ್ಕಾಲಿಕವಾಗಿ ವಿಸರ್ಜನಾ ಘಟಕ (ಮೊಬೈಲ್ ಟ್ಯಾಂಕ್)ಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಪಿಒಪಿ ತಯಾರಿಕಾ ಘಟಕಗಳ ಪರಿಶೀಲನೆ:
ನಗರದಲ್ಲಿ ಪರಿಸರ ಸ್ನೇಹಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಪಿಒಪಿ ಮೂರ್ತಿಗಳ ತಯಾರಿಕೆಯನ್ನು ನಿಷೇಧಿಸಲಾಗಿದ್ದು, ಗಣೇಶಮೂರ್ತಿ ತಯಾರಿಕಾ ಘಟಕಗಳಿಗೆ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ಒಂದು ವೇಳೆ ಪಿಒಪಿ ಗಣೇಶಮೂರ್ತಿ ತಯಾರಿಕೆ ಕಂಡುಬಂದಲ್ಲಿ ದಂಡ ವಿಧಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್, ಎಲ್ಲ ವಲಯಗಳ ಆಯುಕ್ತರು, ಬಿಬಿಎಂಪಿ, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್, ಅಗ್ನಿಶಾಮಕ, ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.