ಬೆಂಗಳೂರು,ಜೂ.12- ನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರನ್ನು ಐದು ಭಾಗಗಳನ್ನಾಗಿ ವಿಭಜನೆ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಕನ್ನಡ ಪರ ಹೋರಾಟಗಾರರು ಹಾಗೂ ಬಿಬಿಎಂಪಿ ಮಾಜಿ ಸದಸ್ಯರುಗಳು ಸರ್ಕಾರದ ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕರವೇ ಅಧ್ಯಕ್ಷ ನಾರಾಯಣಗೌಡ, ವಾಟಾಳ್ ನಾಗರಾಜ್ ಬಿಬಿಎಂಪಿ ಮಾಜಿ ಸದಸ್ಯರಾದ ಎನ್.ಆರ್.ರಮೇಶ್, ಪದನಾಭನಗರ ನಾಡಪ್ರಭು ಕೆಂಪೇಗೌಡ ನಾಗರೀಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜ್ ಮತ್ತಿತರರು ಯಾವುದೇ ಕಾರಣಕ್ಕೂ ಬಿಬಿಎಂಪಿ ವಿಭಜನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.
ನಾಡಪ್ರಭು ಕೆಂಪೇಗೌಡ ಅವರು ಕಟ್ಟಿರುವ ವ್ಯವಸ್ಥಿತ ನಗರ ಬೆಂಗಳೂರನ್ನು ವಿಭಜನೆ ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ನಾರಾಯಣಗೌಡ ಹಾಗೂ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳಿಗೆ ಪತ್ರ ಬರೆದಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಬೆಂಗಳೂರಿನ ಇತಿಹಾಸದ ಪಾಠ ಹೇಳುವ ಮೂಲಕ ಯಾವುದೇ ಕಾರಣಕ್ಕೂ ಬಿಬಿಎಂಪಿ ವಿಭಜನೆ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಜಯನಗರ ಸಾವ್ರಾಜ್ಯದ ಅರಸರಾದ ಅಚ್ಯುತರಾಯರಿಂದ ಹನ್ನೆರಡು ಹೋಬಳಿ (ಉತ್ತರಹಳ್ಳಿ, ವರ್ತೂರು, ಯಲಹಂಕ, ಬೇಗೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ, ಕುಂಬಳಗೋಡು, ಕಾಗಳ್ಳಿ, ಬಾಣಾವಾರ ಮತ್ತು ಹೆಸರುಘಟ್ಟ) ಗಳನ್ನು ಜಹಗೀರಾಗಿ ಪಡೆದ ಕೆಂಪೇಗೌಡರು 1537ರಲ್ಲಿ ಬೆಂಗಳೂರು ನಿರ್ಮಿಸಿದ್ದಾರೆ. ಅಂತಹ ಮಹಾನುಭಾವರು ಕಟ್ಟಿರುವ ಬೆಂಗಳೂರನ್ನು ವಿಭಜಿಸುವುದು ಸೂಕ್ತವಲ್ಲ ಎಂದು ಅವರು ಸಲಹೆ ನೀಡಿದ್ದಾರೆ.
ಬೆಂಗಳೂರು ಮಹಾನಗರವನ್ನು ವಿಭಜನೆ ಮಾಡುವುದಿಲ್ಲ ಆದರೆ, ಬಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆಯನ್ನು ಐದು ಭಾಗಗಳಾಗಿ ವಿಭಜನೆ ಮಾಡುತ್ತೇವೆ ಎಂದು ಅತ್ಯಂತ ಜಾಣ ತನದಿಂದ ಹೇಳಿಕೆ ನೀಡಿದಾಕ್ಷಣ, ತಮ ನಿಜ ಬಣ್ಣ ಬಯಲಾಗುವುದಿಲ್ಲ ಎಂದು ತಾವು ಭಾವಿಸಿದರೆ ಅದು ತಪ್ಪಾಗುತ್ತದೆ. ಒಂದು ವೇಳೆ ವಿಭಜನೆ ಮಾಡಿದರೆ ಅದು ಪ್ರಾದೇಶಿಸಕ ಅಸಮತೋಲನಕ್ಕೂ ಕಾರಣವಾಗುತ್ತದೆ. ಹೀಗಾಗಿ ಈ ಕೂಡಲೇ ನಿಮ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಬಿಬಿಎಂಪಿ ವಿಭಜನೆ ಕುರಿತಂತೆ ಪ್ರತಿಕ್ರಿಯಿಸಿರುವ ಪದನಾಭನಗರ ನಾಡಪ್ರಭು ಕೆಂಪೇಗೌಡ ನಾಗರೀಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜ್ ಅವರು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡೆಯಲು ಮುಂದಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಬಿಬಿಎಂಪಿಗೆ ಚುನಾವಣೆ ನಡೆದು ನಾಲ್ಕು ವರ್ಷಗಳಾಗಿವೆ ಇಂತಹ ಸಂದರ್ಭದಲ್ಲಿ ಪಾಲಿಕೆಗೆ ಚುನಾವಣೆ ನಡೆಸುವುದನ್ನು ಬಿಟ್ಟು ವಿಭಜನೆ ಮಾಡುತ್ತೇವೆ ಎಂಬ ಹೇಳಿಕೆ ನೀಡುತ್ತಿರುವುದು ಬಿಬಿಎಂಪಿ ಚುನಾವಣೆಯನ್ನು ಮತ್ತೆ ನಾಲ್ಕು ವರ್ಷಗಳವರೆಗೆ ಮುಂದೂಡುವ ಪ್ರಯತ್ನ ಎನ್ನುವುದು ಸಾಮಾನ್ಯ ನಾಗರೀಕರಿಗೂ ಆರ್ಥವಾಗುತ್ತದೆ. ಇಂತಹ ವಿಫಲ ಯತ್ನ ಮಾಡುವುದನ್ನು ಬಿಟ್ಟು ಈ ಕೂಡಲೇ ಚುನಾವಣೆ ನಡೆಸಿ ಎಂದು ಅವರು ಆಗ್ರಹಿಸಿದ್ದಾರೆ.
ಐದು ಪಾಲಿಕೆ ನಿರ್ಮಾಣ ಮಾಡಿದರೆ ಇಲ್ಲಿನ ಮೂಲ ನಿವಾಸಿಗಳಾದ ಕನ್ನಡಿಗರಿಗೆ ಅನ್ಯಾಯವಾಗುತ್ತದೆ ಇದರ ಜೊತೆಗೆ ಅನ್ಯಭಾಷಿಕರಿಗೆ ಮಣೆ ಹಾಕಿದಂತಾಗುತ್ತದೆ ಹೀಗಾಗಿ ಅಂತಹ ಪ್ರಯತ್ನ ಮಾಡುವುದನ್ನು ನಮ ವೇದಿಕೆ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.ಇದರ ಜತೆಗೆ ಕಾಂಗ್ರೆಸ್ ಪಕ್ಷದ ಕೆಲ ಮಾಜಿ ಬಿಬಿಎಂಪಿ ಸದಸ್ಯರುಗಳು ಕೂಡ ಸರ್ಕಾರದ ಈ ನಿರ್ಧಾರಕ್ಕೆ ಅಪಸ್ವರ ಎತ್ತಿದ್ದಾರೆ.
ಹೇಗೆ ವಿಭಜನೆ:
ಈಗಿರುವ 225 ವಾರ್ಡ್‌ಗಳನ್ನು 400 ವಾರ್ಡ್‌ಗಳನ್ನಾಗಿ ವಿಭಜಿಸಿ 80 ವಾರ್ಡ್‌ಗಳನ್ನು ಒಳಗೊಂಡ ಒಂದು ಪಾಲಿಕೆ ರಚನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಈ ರೀತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಭಾಗಗಳನ್ನಾಗಿ ಮಾಡುವ ಮೂಲಕ ಪಾರದರ್ಶಕ ಆಡಳಿತ ನೀಡಲಾಗುವುದು ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ.
ಬಿಬಿಎಂಪಿಯನ್ನು ಐದು ಭಾಗಗಳನ್ನಾಗಿ ವಿಭಜಿಸುವ ಕುರಿತಂತೆ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಹಾಗೂ ಬಿಬಿಎಂಪಿ ಮಾಜಿ ಕಮಿಷನರ್ ಸಿದ್ದಯ್ಯ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅವರು ನೀಡಿರುವ ಸಮಿತಿ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡ ನಂತರ ಬಿಬಿಎಂಪಿಯನ್ನು ಐದು ಭಾಗಗಳನ್ನಾಗಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ.