ಬೆಂಗಳೂರು,ಆ.30- ಸಿಲಿಕಾನ್ ಸಿಟಿಯ ಪಿಜಿಗಳಿಗೆ ಪಾಲಿಕೆ ಶಾಕ್ ನೀಡಿದೆ. ಪಿಜಿಗಳಿಗಾಗಿ ಜಾರಿಗೆ ತಂದಿರುವ ಹೊಸ ಮಾರ್ಗಸೂಚಿಯನ್ನು ಸೆಪ್ಟೆಂಬರ್ 15ರೊಳಗೆ ಅಳವಡಿಸಿಕೊಳ್ಳದಿದ್ದರೆ ಅಂತಹ ಪಿಜಿಗಳ ಪರವಾನಿಗಿ ರದ್ದುಪಡಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಗಡುವಿನೊಳಗೆ ಹೊಸ ಮಾರ್ಗಸೂಚಿ ಅಳವಡಿಸಿಕೊಳ್ಳದಿದ್ದರೆ ಅಂತಹ ಪಿಜಿಗಳನ್ನು ಅನಧಿಕೃತ ಎಂದು ಪರಿಗಣಿಸಿ ಅವುಗಳ ಲೈಸೆನ್ಸ್ ರದ್ದುಗೊಳಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೂ ನಗರದಲ್ಲಿ ಕೇವಲ ಎರಡು ಸಾವಿರ ಪಿಜಿಗಳಿಗೆ ಮಾತ್ರ ಲೈಸೆನ್ಸ್ ವಿತರಣೆ ಮಾಡಲಾಗಿದೆ. ಆದರೆ ನಗರದಲ್ಲಿ ಸಾವಿರಾರು ಪಿಜಿಗಳಿವೆ. ಹೀಗಾಗಿ ಅನಧಿಕೃತ ಪಿಜಿಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೂ ಅಧಿಕಾರಿಗಳು ಚಾಲನೆ ನೀಡಿದ್ದಾರೆ.
ನಗರದಲ್ಲಿ ಸರಿ ಸುಮಾರು 25 ಸಾವಿರಕ್ಕೂ ಅಧಿಕ ಪಿಜಿಗಳ ಕಾರ್ಯಾಚರಣೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅನಧಿಕೃತ ಪಿಜಿಗಳಿಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ಪ್ಲಾನ್ ಸಿದ್ದಪಡಿಸಿಕೊಂಡಿದೆ. ಯಾವುದೇ ಪಿಜಿಗಳಾಗಿದ್ದರೂ ಅವರು ಬರುವ ಸೆಪ್ಟೆಂಬರ್ 15ರೊಳಗೆ ಲೈಸೆನ್ಸ್ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇಲ್ಲ ಅಂದರೆ ಅವುಗಳನ್ನು ಬಂದ್ ಮಾಡುವ ಎಚ್ಚರಿಕೆ ನೀಡಲಾಗಿದೆ.
ನಗರದಲ್ಲಿ ಎಷ್ಟೆ ಪಿಜಿಗಳಿದ್ದರೂ ಸೆ.15ರೊಳಗೆ ಲೈಸೆನ್ಸ್ ಪಡೆದುಕೊಳ್ಳಿ ಇಲ್ಲ ಶಿಕ್ಷೆ ಎದುರಿಸಲು ಸಿದ್ದರಾಗಿ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸೂರಲ್ಕರ್ ವಿಕಾಸ್ ಕಿಶೋರ್ ಎಚ್ಚರಿಸಿದ್ದಾರೆ.