ನವದೆಹಲಿ, ಮೇ – ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಹಾಗೂ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಪ್ರೀಮಿಯರ್ ಲೀಗ್ ( ಐಪಿಎಲ್) ನ ಮುಂದಿನ ಎಲ್ಲಾ ಹಂತದ ಪಂದ್ಯಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಾತ್ಕಾಲಿಕವಾಗಿ ಅಮಾನತುಪಡಿಸುವ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.
ಕಳೆದ ರಾತ್ರಿ ಪಾಕಿಸ್ತಾನ ಭಾರತದ ಮೂರು ಗಡಿ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಡೋನ್ ದಾಳಿ ನಡೆಸಿತ್ತು. ಹೀಗಾಗಿ ಹಿಮಚಾಲ ಪ್ರದೇಶದಲ್ಲಿ ನಡೆಯುತ್ತಿದ್ದ ದೆಹಲಿ ಹಾಗೂ ಪಂಜಾಬ್ ನಡುವಿನ ಪಂದ್ಯವನ್ನು ರದ್ದುಪಡಿಸಲಾಗಿತ್ತು. ಐಪಿಎಲ್ ಪಂದ್ಯ ನಡೆಯುವ ವೇಳೆ ಪಾಕ್ ನ ಆತ್ಮಾಹುತಿ ದಾಳಿ ಇಲ್ಲವೇ ಡೋನ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಬಿಸಿಸಿಐಗೆ ಕೇಂದ್ರ ಗುಪ್ತಚರ ವಿಭಾಗ ಎಚ್ಚರಿಕೆ ಕೊಟ್ಟಿತ್ತು. ಹೀಗಾಗಿ ಇಂದು ತುರ್ತು ಸಭೆ ನಡೆಸಿದ ಬಿಸಿಸಿಐ ಬಾಕಿ ಉಳಿದಿರುವ 16 ಐಪಿಎಲ್ ಪಂದ್ಯಗಳನ್ನು ತಾತ್ಕಾಲಿಕವಾಗಿ ಅಮಾನತುಪಡಿಸಲಾಗಿದೆ ಎಂದು ಘೋಷಣೆ ಮಾಡಿತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೂರ್ನಮೆಂಟ್ ಅಧಿಕಾರಿಗಳೊಂದಿಗೆ ತುರ್ತು ಸಭೆಯ ನಂತರ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಅಭಿಮಾನಿಗಳ ಸುರಕ್ಷತೆಯನ್ನು ಪ್ರಾಥಮಿಕ ಕಾಳಜಿ ಎಂದು ಉಲ್ಲೇಖಿಸಿದೆ. ದೇಶವು ಯುದ್ಧದಲ್ಲಿರುವಾಗ ಕ್ರಿಕೆಟ್ ನಡೆಯುತ್ತಿರುವುದು ಚೆನ್ನಾಗಿ ಕಾಣುತ್ತಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೇ 25 ರಂದು ಕೋಲ್ಕತ್ತಾದಲ್ಲಿ ಮುಕ್ತಾಯಗೊಳ್ಳಬೇಕಿದ್ದ ಋತುವಿನ ಉಳಿದ ಪಂದ್ಯಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಇದಕ್ಕೂ ಮೊದಲು, ಮೇ.8 ರಂದು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಹತ್ತಿರದ ಜಮ್ಮು ಮತ್ತು ಪಠಾಣ್ ಕೋಟ್ನಲ್ಲಿ ವಾಯು ದಾಳಿ ಎಚ್ಚರಿಕೆಯ ಕಾರಣ ಮಧ್ಯದಲ್ಲಿಯೇ ಸ್ಥಗಿತಗೊಳಿಸಲಾಯಿತು. ಸಂಭಾವ್ಯ ದಾಳಿಯ ನಡುವೆ ವೀಕ್ಷಕರನ್ನು ಸ್ಥಳಾಂತರಿಸಲಾಗಿತ್ತು.
ಮೇ 9 ರಂದು ಲಕ್ಕೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್‌ಸ್ ಬೆಂಗಳೂರು ನಡುವಿನ ಪಂದ್ಯವು ಯೋಜಿಸಿದಂತೆ ಮುಂದುವರಿಯುತ್ತದೆ ಎಂದು ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಸೂಚಿಸಿದರೂ, ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಕಾರಣ, ಬಿಸಿಸಿದ ಪಂದ್ಯಗಳನ್ನು ತಾತ್ಕಾಲಿಕವಾಗಿ ಅಮಾನತುಪಡಿಸುವುದೇ ಸೂಕ್ತ ಎಂಬ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.
ಮುಂದಿನ ಸೂಚನೆ ಬರುವವರೆಗೂ ಲೀಗ್ ಅನ್ನು ಅಮಾನತುಗೊಳಿಸಲಾಗಿದೆ ಮತ್ತು ಅಧಿಕೃತ ನಿರ್ದೇಶನಗಳಿಗಾಗಿ ಕಾಯುತ್ತಿರುವಾಗ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಈ ನಿರ್ಧಾರವು ಸಾಗರೋತ್ತರ ಕ್ರಿಕೆಟ್ ಮಂಡಳಿಗಳ ಗಮನವನ್ನೂ ಸೆಳೆದಿದೆ. ಹಲವಾರು ಅಂತಾರಾಷ್ಟ್ರೀಯ ಆಟಗಾರರು ಮತ್ತು ತರಬೇತುದಾರರು ಭಾಗಿಯಾಗಿರುವುದರಿಂದ, ಕ್ರಿಕೆಟ್ ಆಸ್ಟ್ರೇಲಿಯಾ ಶುಕ್ರವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಭಾರತದಲ್ಲಿನ ತನ್ನ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದೆ.
ಆಟಗಾರರನ್ನು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ರೈಲಿನ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದೇವೆ. ಆಟಗಾರರು ರೈಲಿನ ಮೂಲಕ ಡೆಲ್ಲಿಗೆ ತೆರಳುವ ಸಾಧ್ಯತೆಯಿದೆ. ಅಲ್ಲದೇ ಪಾಕ್‌ನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ್ ಸೂಪರ್ ಲೀಗ್‌ನ ಉಳಿದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲು ಪಿಸಿಬಿ ನಿರ್ಧಾರ ಕೈಗೊಂಡಿದೆ.
ಎ. 22 ರಂದು ಕಾಶ್ಮೀರದ ಪಹಲ್ಲಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕ್ ಉಗ್ರರ 9 ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.ಪಹಲ್ಯಾಮ್ ಉಗ್ರ ದಾಳಿ ಬೆನ್ನಲ್ಲೇ ಪಾಕ್ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿರುವ ಭಾರತ ಅಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ 9 ಕಡೆ ಕ್ಷಿಪಣಿ ದಾಳಿ ನಡೆಸಿ ಉಗ್ರರ ಅಡುಗುತಾಣಗಳನ್ನು ಧ್ವಂಸಗೊಳಿಸಿತ್ತು. ಇದರ ಬೆನ್ನಲ್ಲೇ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವ ಮಾತುಗಳನ್ನು ಆಡಿರುವ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್ ಸೇರಿದಂತೆ ಭಾರತದ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. ಭಾರತೀಯ ಸೇನೆಯೂ ಕೂಡ ಇದಕ್ಕೆ ದಿಟ್ಟ ಪ್ರತಿಕ್ರಿಯೆ ನೀಡುತ್ತಿದೆ.
ಐಪಿಎಲ್ ಲೀಗ್ ಹಂತದಲ್ಲಿ ಇನ್ನೂ 12 ಪಂದ್ಯಗಳು ಬಾಕಿ ಇವೆ. ಲಕ್ಕೋ, ಹೈದರಾಬಾದ್, ಅಹಮದಾಬಾದ್, ದೆಹಲಿ, ಚೆನ್ನೈ, ಬೆಂಗಳೂರು, ಮುಂಬೈ ಮತ್ತು ಜೈಪುರ ನಗರಗಳಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ ಮೂರು ಪಂದ್ಯಗಳು ಅಹಮದಾಬಾದ್ ನಲ್ಲಿ ತಲಾ ಎರಡು ಪಂದ್ಯಗಳು ಲಕ್ಷ್ಮೀ ಮತ್ತು ಬೆಂಗಳೂರಿನಲ್ಲಿ ಮತ್ತು ತಲಾ ಒಂದು ಪಂದ್ಯ ಹೈದರಾಬಾದ್, ದೆಹಲಿ, ಚೆನ್ನೈ ಮುಂಬೈ ಮತ್ತು ಜೈಪುರದಲ್ಲಿ ನಡೆಯಬೇಕಿತ್ತು.
ವೈಆಫ್‌ಗಳ ಭಾಗವಾಗಿ, ಕ್ವಾಲಿಫೈಯರ್ ಮತ್ತು ಎಲಿಮಿನೇಟರ್-1 ಪಂದ್ಯಗಳು ಹೈದರಾಬಾದ್‌ನಲ್ಲಿ ನಡೆಯಲಿದ್ದು, ಎಲಿಮಿನೇಟರ್-2 ಮತ್ತು ಅಂತಿಮ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಬೇಕಿತ್ತು. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಸದ್ಯದ ಪರಿಸ್ಥಿತಿ ಆಧರಿಸಿ ನಾವು ಪಂದ್ಯಾವಳಿಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಮಗೆ ಎಲ್ಲಕ್ಕಿಂತ ಆಟಗಾರರ ಸುರಕ್ಷತೆ ಮುಖ್ಯ. ಭದ್ರತಾ ಕಾರಣಗಳಿಂದಾಗಿ ಪಂಜಾಬ್ -ದೆಹಲಿ ಪಂದ್ಯವನ್ನು ಮುಂದುವರಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಐಪಿಎಲ್ ಅನ್ನು ವಿದೇಶಕ್ಕೆ ಸ್ಥಳಾಂತರಿಸಬಹುದು ಎಂಬ ವರದಿಯೂ ಇತ್ತು. 2009ರಲ್ಲಿ ಸಾರ್ವತ್ರಿಕ ಚುನಾವಣೆಗಳ ಕಾರಣದಿಂದಾಗಿ ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. 2014ರಲ್ಲೂ ಕೆಲ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಗಿತ್ತು. ಕೊರೋನಾದಿಂದಾಗಿ 2020ರ ಲೀಗ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು. 2021ರಲ್ಲಿ ಕೆಲ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು.