ಬೆಂಗಳೂರು, ಸೆ.20- ಕಂಡ ಕಂಡ ಖಾಲಿ ಜಾಗಗಳಿಗೆ ಬೇಲಿ ಹಾಕುತ್ತಿದ್ದ ಬಿಬಿಎಂಪಿ ಮಾಜಿ ಸದಸ್ಯ ಹನುಮಂತೇಗೌಡ ಒತ್ತುವರಿ ಮಾಡಿಕೊಂಡಿದ್ದ ಕೋಟಿ ಕೋಟಿ ಬೆಲೆಬಾಳುವ ಬಿಡಿಎಗೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಿಡಿಎ ಎಸ್‌ಪಿ ಲಕ್ಷ್ಮೀಗಣೇಶ್ ನೇತೃತ್ವದಲ್ಲಿ ಇಂದು ದಿಢೀರ್ ದಾಳಿ ನಡೆಸಿದ ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಅಂದಾಜು 150 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿ ಬಳಿಯ ವಳಗೆರೆಹಳ್ಳಿ ಸರ್ವೆ ನಂಬರ್‌ನಲ್ಲಿದ ಬಿಡಿಎಗೆ ಸೇರಿದ್ದ 1.22 ಎಕರೆ ಭೂಮಿಗೆ ಹನುಮಂತೆಗೌಡ ಬೇಲಿ ಹಾಕಿದ್ದರು. ಮಾತ್ರವಲ್ಲ ಆ ಜಮೀನನ್ನು ಪತ್ನಿ ಲತಾ ಹೆಸರಿಗೆ ಖಾತೆ ಮಾಡಿಸಿದ್ದರು.
ಬೇಲಿ ಹಾಕಿರುವ ಪ್ರದೇಶ ಬಿಡಿಎಗೆ ಸೇರಿದ್ದು ಜಾಗ ತೆರವು ಮಾಡುವಂತೆ ಬಿಡಿಎ ಅಧಿಕಾರಿಗಳು ಹಲವಾರು ಬಾರಿ ನೋಟೀಸ್ ನೀಡಿದ್ದರೂ ಹನುಮಂತೆಗೌಡ ಕ್ಯಾರೇ ಎಂದಿರಲಿಲ್ಲ. ಹೀಗಾಗಿ ಇಂದು ಮುಂಜಾನೆ ಲಕ್ಷ್ಮೀ ಗಣೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಆಸ್ತಿ ವಶಪಡಿಸಿಕೊಳ್ಳಲಾಗಿದೆ.
ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹನುಮಂತೇಗೌಡ ಅವರು ಈ ಹಿಂದೆ ಹೇರೋಹಳ್ಳಿ ವಾರ್ಡ್‌ನಿಂದ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.