ಬೆಳಗಾವಿ, ನ.11- ಇಲ್ಲಿನ ಐತಿಹಾಸಿಕ ಹಲಸಿ ಮತ್ತು ಬೇಕವಾಡ ರಸ್ತೆಯ ನರಸೇವಾಡಿ ಸೇತುವೆ ಬಳಿ ಇಂದು ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.
ಹಲಸಿ ಗ್ರಾಮದ ನಿವಾಸಿ ಅಲ್ತಾಫ ಗೌಸ್ ಮಕಾನದಾರ (27) ಗುಂಡಿಗೆ ಬಲಿಯಾದ ಯುವಕ.ಇಂದು ಮುಂಜಾನೆ 3 ಗಂಟೆ ಸಂದರ್ಭದಲ್ಲಿ ಆಗುಂತಕರು ಏಕಾಏಕಿ ಯುವಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯನ್ನು ನಡೆಸಿದವರು ಯಾರು, ಯಾಕೆ ಎಂಬ ನಿಖರ ಕಾರಣ ತಿಳಿದುಬಂದಿಲ್ಲ.
ಹಲಸಿ -ಖಾನಾಪುರದ ಬೇಕವಾಡಕ್ಕೆ ಹೋಗುವ ನರಸೇವಾಡಿ ಸೇತುವೆ ಬಳಿ ನಿತ್ಯ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದ್ದು ಆ ಸ್ಥಳಕ್ಕೆ ಅಲ್ತಾಫ್ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಘಟನೆ ವಿಷಯ ತಿಳಿದು ಯುವಕನ ಶವವನ್ನು ಸ್ಥಳೀಯ ಕೆಲವರು ಮನೆಗೆ ತಂದಿದ್ದಾರೆ. ಆ ನಂತರ ಸುದ್ದಿ ಎಲ್ಲೆಡೆ ಹರಡಿದೆ.
ಸುದ್ದಿ ತಿಳಿದು ಬೈಲಹೊಂಗಲ ಡಿಎಸ್ಪಿ, ಖಾನಾಪುರ ಪೊಲೀಸ್ ಇನ್ಪೆಕ್ಟರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಗುಂಡಿಗೆ ಬಲಿಯಾದ ಯುವಕನ ಮೇಲೆ ಕಳೆದ ಎರಡು ವರ್ಷಗಳ ಹಿಂದೆಯೇ ಅರಣ್ಯ ಹಾಗೂ ವನ್ಯ ಜೀವಿ ಅಪರಾಧದಲ್ಲಿ ಭಾಗಿಯಾದ ಸಂಬಂಧ ಪ್ರಕರಣಗಳು ದಾಖಲಾಗಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಡಿಎಸ್ಪಿ ರವಿ ನಾಯಕ್, ನಂದಗಡ ಹಾಗೂ ಖಾನಾಪುರ ಪೊಲೀಸ್ ನಿರೀಕ್ಷಕ ಎಸ್. ಸಿ. ಪಾಟೀಲ್ ಸ್ಥಳದಲ್ಲೇ ಠಿಕಾಣಿ ಹೂಡಿದ್ದು ಪರಿಶೀಲನೆ ನಡೆಸಿದ್ದಾರೆ.
ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರವಲಯ ಐಜಿಪಿ ವಿಕಾಸಕುಮಾರ ವಿಕಾಸ ಹಾಗೂ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಗುಂಡಿನ ದಾಳಿ ನಡೆಸಿ ಯುವಕನನ್ನು ಹತ್ಯೆಗೈದು ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.