ಬೆಳಗಾವಿ, ಡಿ.16– ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನ ಎರಡು ವಾರಗಳ ಪ್ರವಾಸ ಕಾರ್ಯಕ್ರಮದಂತಾಗಿದೆ. ಅದರ ಹೊರತಾಗಿ ಯಾವ ಪ್ರಯೋಜನಗಳೂ ಆಗುತ್ತಿಲ್ಲ ಎಂದು ಗುರುಮಿಠಕಲ್ ಕ್ಷೇತ್ರ ಶಾಸಕ ಶರಣಗೌಡ ಕಂದಕೂರ ಆರೋಪಿಸಿದರು.
ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಅವರು, ಬೆಳಗಾವಿಯ ಅಧಿವೇಶನ ಎರಡು ವಾರಗಳ ಟೂರಿಂಗ್ ಸಮಾವೇಶವಾಗುತ್ತಿದೆ. ಪ್ರತಿ ಅಧಿವೇಶನಕ್ಕೆ 25 ಕೋಟಿ ರೂಪಾಯಿ ಖರ್ಚಾಗುತ್ತದೆ. ಇಲ್ಲಿ ಚರ್ಚೆಯಾಗುತ್ತದೆ. ನಾನು ಕಳೆದ ಅಧಿವೇಶನದಲ್ಲಿ ಇಲ್ಲಿ ಸಮಸ್ಯೆಗಳ ಬಗ್ಗೆ ಜೋರಾಗಿ ಮಾತನಾಡಿದೆ, ಭಾರೀ ಪ್ರಚಾರವನ್ನು ಪಡೆದುಕೊಂಡೆ ಆದರೆ ಸಮಸ್ಯೆ ಈವರೆಗೂ ಪರಿಹಾರವಾಗಿಲ್ಲ. ಹಾಗಾಗಿ ಚರ್ಚೆಗೆ ಅವಕಾಶ ನೀಡಿದ್ದಕ್ಕಾಗಿ ಸಭಾಧ್ಯಕ್ಷರಿಗೆ ಧನ್ಯವಾದ ಹೇಳುವುದಿಲ್ಲ. ಹಾಗೇಯೇ ಈ ಅಧಿವೇಶನ ಯಾವ ಪುರುಷಾರ್ಥಕ್ಕೆ ನಡೆಸುತ್ತದೆ ಎಂದು ಹೇಳಬೇಕು ಎಂದರು.
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿದೆ. ಸಚಿವ ಭೈರತಿ ಸುರೇಶ್ ಸೇರಿ ಅನೇಕರು ಗುಂಪಾಗಿ ನಿಂತು ಚರ್ಚೆ ಮಾಡುತ್ತಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸರ್ಕಾರ ಚರ್ಚೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು.
ಚರ್ಚೆ ಮುಂದುವರೆಸಿದ ಕಂದಕೂರ, ಕಲ್ಯಾಣ ಕರ್ನಾಟಕ ಭಾಗದ 41 ಮಂದಿ, ಕಿತ್ತೂರು ಕರ್ನಾಟಕ ಭಾಗದ 50 ಮಂದಿ ಸೇರಿ 91 ಮಂದಿ ಶಾಸಕರಿದ್ದೇವೆ. ಅವರಲ್ಲಿ ಬಹಳಷ್ಟು ಮಂದಿ ಇಲ್ಲಿ ಕುಳಿತಿಲ್ಲ. ಮುಂದಿನ ಅಧಿವೇಶನಕ್ಕೆ ನಾನು ಹಾಜರಾದಾಗ ಸರ್ಕಾರದಿಂದ ಯಾವ ಸೌಲಭ್ಯಗಳನ್ನು ಪಡೆಯುವುದಿಲ್ಲ. ಕಾಫಿಯನ್ನು ಕುಡಿಯುವುದಿಲ್ಲ. ನನ್ನ ಖರ್ಚಿನಲ್ಲಿ ನಾನು ಬಂದು ಮಾತನಾಡಿ ಹೋಗುತ್ತೇನೆ. ಮಾತನಾಡುವಾಗ ಯಾವ ಅನುದಾನವನ್ನುಕೇಳುವುದಿಲ್ಲ ಎಂದರು.
ಅಧಿವೇಶನಕ್ಕೆ ಬರುವ ಶಾಸಕರಿಗೆ ಆತಿಥ್ಯ ನೀಡಲು ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಐಎಎಸ್ ಅಧಿಕಾರಿಗಳಿಗೆ ಉಡಾಫೆ ಅಭಿಪ್ರಾಯಗಳಿವೆ. ನಮ ಪರಿಸ್ಥಿತಿ ಕಣ್ಣೀರು ಬರುವಂತಿದೆ. ನನ್ನ ಕ್ಷೇತ್ರಕ್ಕೆ ಅನುದಾನ ಕೇಳುವುದಿಲ್ಲ. ನಮ ಭಾಗದ ಸಮಸ್ಯೆಗಳನ್ನು ಮಾತ್ರ ಮಾತನಾಡುತ್ತೇನೆ ಎಂದರು.
ಬಳ್ಳಾರಿಯಲ್ಲಿ ಐದು ಮಂದಿ ಬಾಣಂತಿಯರು ಸರ್ಕಾರ ಪೂರೈಸಿದ ಔಷಧಿಗಳನ್ನು ಪಡೆದು ಸಾವನ್ನಪ್ಪಿದ್ದಾರೆ. ಅವರ ಶಾಪ ತಟ್ಟದೆ ಬಿಡುವುದಿಲ್ಲ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ
ಜಿ.ಟಿ.ಪಾಟೀಲ್ ಕ್ಷೇತ್ರದಲ್ಲಿ ಆಲಮಟ್ಟಿ ಡ್ಯಾಂ ಎತ್ತರಿಸಲು ನಿರ್ಧರಿಸಲಾಗಿದೆ. ಪರಿಹಾರಕ್ಕಾಗಿ ರೈತರು ಧರಣಿ ಕುಳಿತಿದ್ದಾರೆ.
ಕಲುಬರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಯಾವ ನಿರ್ಣಯವೂ ಜಾರಿಗೆ ಬಂದಿಲ್ಲ. ಜಿಲ್ಲೆಯಲ್ಲಿ 127 ಹಸುಗೂಸುಗಳು ಸಾವನ್ನಪ್ಪಿವೆ. ಎಲ್ಲರೂ ಬಡವರ ಮಕ್ಕಳು. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಅಧಿವೇಶನದಲ್ಲಿ ಕೇಳು ಎನ್ನುತ್ತಾರೆ. ಇಲ್ಲಿ ಕೇಳಿದರೆ ಯಾವ ಪ್ರಯೋಜನವೂ ಆಗುತ್ತಿಲ್ಲ ಎಂದು ಆರೋಪಿಸಿದರು.
ಇಲ್ಲಿ ನಡೆದ ಚರ್ಚೆಗಳಲ್ಲಿ ಎಷ್ಟು ಜಾರಿಯಾಗಿವೆ. ನಾಲ್ಕು ಕಂದಾಯ ವಿಭಾಗಳಲ್ಲಿನ ಆಸ್ಪತ್ರೆ, ಶಾಲೆಗಳ ಸಂಖ್ಯೆ ಹಾಗೂ ಸೌಲಭ್ಯಗಳ ಬಗ್ಗೆಯೂ ವಿಮರ್ಶೆ ನಡೆಯಬೇಕಿದೆ. ಯಾದಗಿರಿ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ.
ಯಡ್ರಾಮಿಯಲ್ಲಿ ಲಂಚಾಣಿ ಸಮುದಾಯದ ಯುವತಿಯ ಮೇಲೆ ಅತ್ಯಾಚಾರವಾಗಿದೆ. ಆರೋಪಿಗಳಿಗೆ ಗುಂಡಿಟ್ಟು ಹೊಡೆಯಬೇಕು ಎಂದು ಶರಣಗೌಡ ಕಂದಕೂರ ಹೇಳಿದಾಗ, ಆಡಳಿತ ಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ, ಗುಂಡಿಟ್ಟು ಹೊಡೆಯಿರಿ ಎಂಬ ಹೇಳಿಕೆ ಬೇಡ ಎಂದರು. ಕಾನೂನು ಮೀರಿ ಯಾರು ಮಾತನಾಡಬೇಡಿ ಎಂದು ಸಭಾಧ್ಯಕ್ಷ ಸ್ಥಾನದಲ್ಲಿದ್ದ ರುದ್ರಪ್ಪ ಲಮಾಣಿ ಸಲಹೆ ನೀಡಿದರು. ನಾನು ಮಾತನಾಡಿದ್ದನ್ನೆಲ್ಲಾ ಕಡತದಿಂದ ತೆಗೆಯಿರಿ ಎಂದು ಶಾಸಕರು ಆಕ್ರೋಶ ವ್ಯಕ್ತ ಪಡಿಸಿದರು. ಜೆಡಿಎಸ್ ಶಾಸಕ ನೇಮಿರಾಜ್ ನಾಯಕ ಹಾಗೂ ಇತರರು ಕಂದಕೂರ ಅವರ ಬೆಂಬಲಕ್ಕೆ ನಿಂತರು.
ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಶಾಸಕರ ಆಕ್ರೋಶ ನಮಗೆ ಅರ್ಥವಾಗುತ್ತದೆ. ಇಂತಹ ಘಟನೆಗಳಾದಾಗ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿ, ಚರ್ಚೆಗೆ ಇತಿಶ್ರೀ ಹಾಡಿದರು.ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಜೋಡಿ ಶರಣಬಸವೇಶ್ವರ ಹೆಸರನ್ನು ನಾಮಕರಣ ಮಾಡಿ ಎಂದು ಒತ್ತಾಯಿಸಿದರು.ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಜೋಡಿ ಶರಣಬಸವೇಶ್ವರ ಹೆಸರನ್ನು ನಾಮಕರಣ ಮಾಡಿ ಎಂದು ಕಂದಕೂರ ಒತ್ತಾಯಿಸಿದರು.