ಬಳ್ಳಾರಿ,ಮಾ.2– ಸಂಡೂರು ತಾಲ್ಲೂಕಿನ ಕುರೆಕುಪ್ಪದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡು 3 ಸಾವಿರ ಕೋಳಿಗಳು ಸಾವನ್ನಪ್ಪಿರುವ ಬೆನ್ನಲ್ಲೇ ಬಳ್ಳಾರಿ ತಾಲ್ಲೂಕಿನ ಕಪ್ಪಗುಲ್ಲು ಗ್ರಾಮದ ಕೋಳಿಫಾರಂ ಒಂದರಲ್ಲಿ 8 ಸಾವಿರ ಕೋಳಿಗಳು ಮೃತಪಟ್ಟಿದ್ದು, ಹಕ್ಕಿಜ್ವರ ಭೀತಿ ಎದುರಾಗಿದೆ. ರವಿ ಎಂಬುವವರಿಗೆ ಸೇರಿದ ಕೋಳಿಫಾರಂನಲ್ಲಿ 15 ಸಾವಿರ ಕೋಳಿಗಳು ಇದ್ದು, ಈವರೆಗೆ 8 ಸಾವಿರ ಕೋಳಿಗಳು ಮೃತಪಟ್ಟಿವೆ. ಇನ್ನೂ ಹೆಚ್ಚಿನ ಕೋಳಿಗಳು ಸಾಯುವ ಆತಂಕ ಎದುರಾಗಿದೆ.
ಮೃತ ಕೋಳಿಗಳ ಮಾದರಿಯನ್ನು ಭೂಪಾಲ್‌ನಲ್ಲಿರುವ ರಾಷ್ಟ್ರೀಯ ಪ್ರಾಣಿರೋಗಗಳ ಸಂಸ್ಥೆಗೆ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನೆರೆಡು ದಿನಗಳಲ್ಲಿ ಅಲ್ಲಿಂದ ವರದಿ ಬರುವ ಸಾಧ್ಯತೆಯಿದೆ. ಹಕ್ಕಿ ಜ್ವರ ಎಂದು ಮೃತಪಟ್ಟರೆ ಎಲ್ಲಾ ಕೋಳಿಗಳನ್ನು ಹತ್ಯೆ ಮಾಡಬೇಕಾಗುತ್ತದೆ ಎಂದು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕಾರಬಾರಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿಜ್ವರ ತಡೆಯಲು ಮತ್ತು ಪರಿಶೀಲನೆ ನಡೆಸಲು ಇಲಾಖೆ 10 ತಂಡಗಳನ್ನು ರಚಿಸಿ ಎಲ್ಲೆಡೆ ಪರಿಶೀಲನೆ ನಡೆಸುತ್ತಿದೆ. ಬಳ್ಳಾರಿ ಜಿಲ್ಲೆ ಆಂಧ್ರ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದ್ದು ಚೆಕ್‌ಪೋಸ್ಟ್‌ಗಳ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 74 ಕೋಳಿ ಫಾರಂ ಹಾಗೂ 14 ಮೊಟ್ಟೆ ಸಂವರ್ಧನ ಕೇಂದ್ರಗಳಿದ್ದು, ಇವುಗಳ ಮೇಲೂ ಕೂಡ ನಿಗಾ ವಹಿಸಲಾಗಿದೆ.
ಕುರೆಕುಪ್ಪ ಜಾನುವಾರು ಸಂವರ್ಧನ ಕೇಂದ್ರದಲ್ಲಿ ಕೋಳಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಕುರೆಕುಪ್ಪ ಪುರಸಭೆ ಮತ್ತು ಜಾನುವಾರು ಸಂವರ್ಧನೆ ಕೇಂದ್ರ ವ್ಯಾಪ್ತಿಯಲ್ಲಿ ಕೋಳಿ ಮತ್ತು ಮೊಟ್ಟೆ ಮಾರಾಟವನ್ನು ನಿಷೇಧ ಮಾಡಲಾಗಿದೆ. ಹೋಟೆಲ್, ಡಾಬಾ, ರಸ್ತೆ ಬದಿ ತಳ್ಳುವ ಗಾಡಿಗಳಲ್ಲಿ ಆಹಾರ ಪದಾರ್ಥ ಸಿದ್ಧಪಡಿಸದಂತೆ ಸೂಚಿಸಲಾಗಿದೆ.
ಕುರೆಕುಪ್ಪ ಗ್ರಾಮದ 1 ಕಿ.ಮೀ. ವ್ಯಾಪ್ತಿಯನ್ನು ಅಪಾಯಕಾರಿ ವಲಯ ಎಂದು ಗುರುತಿಸಲಾಗಿದೆ. ಹಕ್ಕಿಜ್ವರ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.