ಬೇಲೂರು, ಮಾ.10– ಪಟ್ಟಣದ ಬಸ್ ನಿಲ್ದಾಣ ಮುಂಭಾಗದಲ್ಲಿದ್ದ ಹಳೆಯ ವಾಣಿಜ್ಯ ಮಳಿಗೆಯ ಮೇಲ್ಬಾಗದ ಸಜ್ಜಾ ಕುಸಿದು, ಇಬ್ಬರು ಮೃತಪಟ್ಟು, ಮತ್ತೆ ಮೂವರು ಗಂಭೀರವಾಗಿ ಗಾಯ ಗೊಂಡಿರುವ ಘಟನೆ ನಡೆದಿದೆ.ಪಟ್ಟಣದ ಚನ್ನಕೇಶವಸ್ವಾಮಿ ದೇಗುಲಕ್ಕೆ ತೆರಳುವ ರಸ್ತೆಯ ಬಸ್ ನಿಲ್ದಾಣ ಮುಂಭಾಗದಲ್ಲಿ ಸತ್ಯನಾರಾಯಣಗೌಡ ಎಂಬುವವರಿಗೆ ಸೇರಿದ ಹಳೆಯದಾದ ವಾಣಿಜ್ಯ ಮಳಿಗೆಗಳಿವೆ. ಈ ಮಳಿಗೆಗಳನ್ನು ತಾತ್ಕಾಲಿಕವಾಗಿ ಸಿಮೆಂಟ್ ಇಟ್ಟಿಗೆಯಿಂದ ಗೊಡೆ ನಿರ್ಮಿಸಿ, ಮೇಲ್ಬಾವಣಿಗೆ ಸಿಮೆಂಟ್ ಶೀಟ್ ಗಳನ್ನು ಹಾಕಿ ಸಜ್ಜಾನಿರ್ಮಿಸಲಾಗಿತ್ತು.
ಆದರೆ ದಿನ ಕಳೆದಂತೆ ಕಟ್ಟಡದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದ್ದವು. ಈ ಹಿನ್ನೆಲೆಯಲ್ಲಿ ಮಾಲೀಕರು ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವರನ್ನು ತೆರವುಗೊಳಿಸಲು ಮುಂದಾಗಿದ್ದರು. ಆದರೆ ಕೆಲವರು ನ್ಯಾಯಾಲಯದ ಮೆಟ್ಟಿಲು ಹೇರಿದ್ದರು. ಕೆಲ ವರ್ಷಗಳ ನಂತರ ಕೆಲ ಮಳಿಗೆಗಳನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಳಿಗೆಯಲ್ಲಿದ್ದವರನ್ನು ತೆರವು ಗೊಳಿಸಲಾಗಿತ್ತು. ಇನ್ನೂ ಕೆಲವರ ಮಳಿಗೆ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಆದರೆ ಕಾಲಿಯಾಗಿದ್ದ ಶಿಥಿಲ ಮಳಿಗೆಗಳ ಸಜ್ಜಾ ಕೆಳ ಭಾಗದಲ್ಲಿ ಕೆಲ ಬೀದಿ ಬದಿ ವ್ಯಾಪಾರಿಗಳು ಹಣ್ಣು, ತರಕಾರಿ, ಸೊಪ್ಪು, ಹೂವನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.
ಆದರೆ ಶಿಥಿಲಗೊಂಡಿದ್ದ ಕಟ್ಟಡದ ಮೇಲ್ಬಾಗದಲ್ಲಿದ್ದ ಸಿಮೆಂಟ್ ಕಾಂಕ್ರಿಟ್‌ನಿಂದ ನಿರ್ಮಿಸಿದ್ದ ಸಜ್ಜನಿನ್ನೆ ಮದ್ಯಾಹ್ನ 1.15 ರ ಸಮಯದಲ್ಲಿ ಇದ್ದಕ್ಕಿದ್ದಂತೆ ಬೀಳುತ್ತಿರುವುದನ್ನು ಗಮನಿಸಿ ವ್ಯಾಪಾರದಲ್ಲಿ ತೊಡಗಿದ್ದ ಕೆಲವರು ತಪ್ಪಿಸಿಕೊಂಡು ಜೀವ ಉಳಿಸಿ ಕೊಂಡರೆ, ಸಜ್ಜಾದ ಕೆಳಗೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ವರ್ಷದ ಅಮರನಾಥ್ (42), ನಜೀರ್ (48), ಜ್ಯೋತಿ, ಲೀಲಾವತಿ, ಶಿಲ್ಪ, ದೀವ ಎಂಬುವವರ ಮೇಲೆಯೇ ಕುಸಿದು ಬಿದ್ದಿದ್ದರಿಂದ ಅಮರನಾಥ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಬೃಹತ್ ಗಾತ್ರದ ಸಜ್ಜಾವನ್ನು ಕ್ರೇನ್ ಮೂಲಕ ತೆರವುಗೊಳಿಸಿ ಗಂಭೀರವಾಗಿ ಗಾಯ ಗೊಂಡಿದ್ದ ವರ್ಷದ ನಜೀರ್, ಲೀಲಮ್ಮ, ಜ್ಯೋತಿ, ಶಿಲ್ಪ ಎಂಬುವವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಜೀರ್ ಮೃತಪಟ್ಟಿದ್ದಾರೆ.
ಲೀಲಮ್ಮ ಜ್ಯೋತಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಲ್ಪ ಹಾಗೂ ದೀಪ ಎಂಬುವವರು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ, ತಹಸೀಲ್ದಾರ್ ಎಂ.ಮಮತಾ, ಡಿವೈಎಸ್‌ಪಿ ಲೋಕೇಶ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಶೇಷವೆಂದರೆ ಘಟನೆ ನಡೆದ ತಕ್ಷಣವೇ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ಸಮಯ ಪ್ರಜ್ಞೆ ಮೆರೆದು ಕ್ರೇನ್ ತರಿಸಿ ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಗಮನಾರ್ಹವಾಗಿತ್ತು. ಜತೆಗೆ ನಿನ್ನೆ ವಿವಾಹ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಜನರು ಘಟನೆ ನೋಡಲು ಮುಗಿ ಬಿದ್ದಿದ್ದರು. ಪೊಲೀಸರು ವಾಹನಗಳ ದಟ್ಟಣ ನಿಯಂತ್ರಿಸುವಲ್ಲಿ ಪರದಾಡುವಂತಾಗಿತ್ತು.
ತಹಸೀಲ್ದಾರ್ ಹಾಗೂ ದಂಡಾಧಿಕಾರಿ ಎಂ.ಮಮತಾ, ಡಿವೈಎಸ್‌ಪಿ ಲೋಕೇಶ್, ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ, ವೃತ್ತ ನಿರೀಕ್ಷಕ ಜಗದೀಶ್, ಪಿಎಸ್‌ಐ ಪಾಟೀಲ್, ಸುರೇಶ್, ಪುರಸಭೆ ಅಧ್ಯಕ್ಷ ಎ.ಆರ್. .ಅಶೋಕ್, ಸದಸ್ಯರಾದ ಜಮಾಲೂದ್ದೀನ್, ಜಗದೀಶ್ ಸೇರಿದಂತೆ ಇತರರಿದ್ದರು.