ಬೆಂಗಳೂರು,ಡಿ.9- ನಗರದಲ್ಲಿ ರಾತ್ರಿಯಿಂದೀಚೆಗೆ ಸಂಭವಿಸಿದ ಎರಡು ಪ್ರತ್ಯೇಕ ಸ್ವಯಂ ಅಪಘಾತಗಳಲ್ಲಿ ಬಿ ಇ ಪದವೀಧರ ಹಾಗೂ ಖಾಸಗಿ ಕಂಪನಿ ನೌಕರ ಸಾವನ್ನಪ್ಪಿದ್ದಾರೆ.
ಮಲ್ಲೇಶ್ವರಂ:ರಾಜಾಜಿನಗರದಿಂದ ಯಶವಂತಪುರದ ಕಡೆಗೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ತಿರುವಿನಲ್ಲಿ ನಿಯಂತ್ರಣ ತಪ್ಪಿ ಡಾ.ರಾಜಕುಮಾರ್ ಪ್ರತಿಮೆಯ ಪೀಠದ ಕಲ್ಲಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಬಿ ಇ ಪದವೀಧರ ಮೃತಪಟ್ಟಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ರಾಜಾಜಿನಗರ ನಿವಾಸಿ ಯಶಸ್(27) ಮೃತಪಟ್ಟ ಬಿಇ ಪದವೀಧರ.
ಇಂದು ಮುಂಜಾನೆ 1.30 ರ ಸುಮಾರಿನಲ್ಲಿ ಯಶಸ್ ಹೆಲ್ಮೆಟ್ ಧರಿಸದೆ ಬೈಕ್‍ನಲ್ಲಿ ರಾಜಾಜಿನಗರದ ಡಾ.ರಾಜ್‍ಕುಮಾರ್ ರಸ್ತೆ ಮೂಲಕ ಯಶವಂತಪುರದ ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಓರಿಯನ್ ಮಾಲ್ ಬಳಿಯ ರಾಜ್‍ಕುಮಾರ್ ಪ್ರತಿಮೆಯ ಪೀಠದ ಕಲ್ಲಿಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ತಲೆಗೆ ಗಂಭೀರ ಪೆಟ್ಟಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮಲ್ಲೇಶ್ವರಂ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೆಂಗೇರಿ: ಮುಂದೆ ಹೋಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪನಿ ನೌಕರ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಯಶವಂತಪುರ ನಿವಾಸಿ ವಿಜಯ್ (29) ಮೃತಪಟ್ಟವರು.
ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ ವಿಜಯ್ ಅವರು ರಾತ್ರಿ 9.15 ರ ಸುಮಾರಿನಲ್ಲಿ ನೈಸ್ ರಸ್ತೆ ಮೂಲಕ ಯಶವಂತಪುರಕ್ಕೆ ಬೈಕ್‍ನಲ್ಲಿ ಬರುತ್ತಿದ್ದಾಗ ಉಲ್ಲಾಳ ಬ್ರಿಡ್ಜ್ ಬಳಿ ಮುಂದೆ ಹೋಗುತ್ತಿದ್ದ ವಾಹನಕ್ಕೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಉರುಳಿ ಬಿದ್ದು ಗಂಭೀರ ಗಾಯಗೊಂಡರು.
ಈ ವೇಳೆ ವಾಹನ ಚಾಲಕ ವಾಹನ ನಿಲ್ಲಿಸದೆ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಆರ್‍ಆರ್ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.