ಬೆಂಗಳೂರು,ಜು.16– ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಕು ಶಿವನ ಹತ್ಯೆ ಹಿಂದೆ ಮಾಜಿ ಸಚಿವ ಹಾಗೂ ಕೆ.ಆರ್‌ಪುರಂನ ಬಿಜೆಪಿ ಶಾಸಕ ಭೈರತಿ ಬಸವರಾಜ್ ಪಾತ್ರದ ಆರೋಪದ ಮೇಲೆ ಅವರ ವಿರುದ್ಧನಗರದ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ಎಫ್‌ಐಆರ್ ದಾಖಲಾಗಿದೆ.
ಜಮೀನಿನ ವಿಚಾರವಾಗಿ ರೌಡಿಶೀಟರ್ ಶಿವಕುಮಾರ್ ಹಾಗೂ ಭೈರತಿ ಬಸವರಾಜ್ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್ ಎ-5 ಆರೋಪಿ ಎಂದು ಉಲ್ಲೇಖಿಸಿಲಾಗಿದೆ.ಕಳೆದ ರಾತ್ರಿ ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಷು ಶಿವು ಕೊಲೆ ನಡೆದಿದೆ. ಕೊಲೆಗೆ ಭೈರತಿ ಬಸವರಾಜ್ ಕುಮ್ಮಕ್ಕು ನೀಡಿದ್ದಾರೆ ಎಂದು ಶಿವಕುಮಾರ್ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ.
ಬಿಕ್ಷು ಶಿವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೈರತಿ ಬಸವರಾಜ್, ಜಗದೀಶ್, ವಿಮಲ್, ಕಿರಣ್, ಅನಿಲ್ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರದ ಹಲಸೂರು ಕೆರೆ ಬಳಿಯ ಆತನ ಮನೆಯ ಮುಂದೆ ನಿಂತಿದ್ದ ರೌಡಿಶೀಟರ್ ಶಿವಕುಮಾರ್ ಆಲಿಯಾಸ್ ಬಿಕ್ಕು ಶಿವ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಭಾರತಿನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿದ್ದಾರೆ.
ಜಮೀನು ವಿವಾದ :
ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆಯಾದ ಶಿವಕುಮಾರ್ ಹಾಗೂ ಭೈರತಿ ಬಸವರಾಜ್ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ನಗರದ ಬೀದರಹಳ್ಳಿ ಹೋಬಳಿ, ಕಿತ್ತಗನೂರು ಸಿಂಗಾರೆಡ್ಡಿ ಎಂಬುವವರಿಗೆ ಸೇರಿದ ಸರ್ವೇ ನಂಬರ್ 212 ಜಿಪಿಎ ಮಾಡಿಸಿಕೊಂಡಿದ್ದ ಶಿವಕುಮಾರ್‌ಗೆ ಜಿಪಿಎ ರದ್ದುಪಡಿಸಬೇಕು ಹಾಗು ಪೊಸಿಷನ್ ಬಿಟ್ಟುಕೊಡಬೇಕು ಎಂದು ಕೆಲವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಬೆದರಿಕೆ ಹಿನ್ನೆಲೆ ಶಿವಕುಮಾರ್ ಕಳೆದ ಫೆಬ್ರವರಿಯಲ್ಲಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರಂತೆ. ಭೈರತಿ ಬಸವರಾಜ್ ಹಾಗೂ ಗ್ಯಾಂಗ್‌ನಿಂದ ಜೀವಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಬೆದರಿಕೆ ಹಾಕಿದ್ದ ವಿಡಿಯೊ ಸಮೇತ ಭೈರತಿ ಬಸವರಾಜ್, ಜಗದೀಶ್ ಅಲಿಯಾಸ್ ಜಗ್ಗ ಹಾಗೂ ಕಿರಣ್ ಸಹಚರರ ವಿರುದ್ಧ ಶಿವಕುಮಾರ್ ದೂರು ನೀಡಿದ್ದರಂತೆ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ದೂರು ಕೊಟ್ಟ ನಾಲ್ಕು ತಿಂಗಳಲ್ಲಿ ಶಿವಕುಮಾರ್ ಕೊಲೆಯಾಗಿದ್ದು, ಅದೇ ಗ್ಯಾಂಗ್ ನಿಂದ ಕೊಲೆಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ನನ್ನ ವಿರುದ್ಧ ಷಡ್ಯಂತ್ರ: ಭೈರತಿ
ಬಿಕ್ಷು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜು ಅವರು ಪ್ರತಿಕ್ರಿಯೆ ನೀಡಿದ್ದು, ನನಗೂ ಬಿಕ್ಕು ಶಿವ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಕೊಲೆಯಾದವನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೂರು ಕೊಟ್ಟ ತಕ್ಷಣ ಏಕಾಏಕಿ ನನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯಾರೇ ದೂರು ಕೊಟ್ಟರೂ ಎಫ್ ಐಆರ್ ದಾಖಲಿಸಬಹುದಾ? ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದರು.
ಈ ರೀತಿ ಒಬ್ಬರ ತೇಜೋವಧೆ ಮಾಡುವಂಥದ್ದು ಬಹಳ ನೋವಾಗುತ್ತದೆ. ನನ್ನ ಕುರಿತು ಈ ರೀತಿ ಪ್ರಚಾರ ಮಾಡುತ್ತಿರುವುದು ತುಂಬಾ ಬೇಸರ ತರಿಸಿದೆ. ಕ್ಷೇತ್ರದ ಕೆಲಸ ಜನರ ಕೆಲಸ ಬಿಟ್ಟರೆ ಬೇರೆ ಯಾವುದೇ ವ್ಯವಹಾರ ನನಗೆ ಗೊತ್ತಿಲ್ಲ. ಈ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ಯಾವುದೇ ಮಾಹಿತಿ ನನಗೆ ಕೇಳದೆ ನನ್ನ ಮೇಲೆ ಪೊಲೀಸರು ಎಫ್‌ಐಆರ್ ದಾಖಲೆ ಮಾಡುತ್ತಾರೆ. ಯಾರೋ ದೂರು ಕೊಟ್ಟ ತಕ್ಷಣ ನನ್ನ ಮೇಲೆ ಪೊಲೀಸರು ಕೇಸ್ ದಾಖಲಿಸುತ್ತಾರ? ನನ್ನ ವಿರುದ್ಧ ಯಾರು ಷಡ್ಯಂತ್ರ ಮಾಡಿದ್ದಾರೋ ರೋ ಅವರ ವಿರುದ್ಧವಾಗಿ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.