ಬೆಂಗಳೂರು,ಸೆ.8-ಕ್ಯಾಬ್ ಚಾಲಕನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಾಪೂಜಿನಗರದ ನಿವಾಸಿ ಕೌಶಿಕ್ (25) ಕೊಲೆಯಾದ ಕ್ಯಾಬ್ ಚಾಲಕ. ಕೌಶಿಕ್ ಕೋಲಾರದಲ್ಲಿ ಕ್ಯಾಬ್ ಚಾಲಕ ವೃತ್ತಿ ಮಾಡುತ್ತಿದ್ದನು.
ನಿನ್ನೆ ರಾತ್ರಿ ಮನೆಯಲ್ಲಿದ್ದ ಕೌಶಿಕ್ 10.30 ರ ಸುಮಾರಿನಲ್ಲಿ ಹೊರಗೆ ಹೋಗಿದ್ದಾನೆ. ಮೈಸೂರು ರಸ್ತೆಯ ಬಾಪೂಜಿನಗರದ ಬಳಿಯೇ ದುಷ್ಕರ್ಮಿಗಳು ಕೌಶಿಕ್ ಮೇಲೆ ದಾಳಿ ಮಾಡಿ ಬಿಯರ್ ಬಾಟಲಿಯಿಂದ ಹೊಡೆದು ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಬ್ಯಾಟರಾಯನಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕೌಶಿಕ್‌ನನ್ನು ರಾತ್ರಿ ಯಾರು ಕರೆಸಿಕೊಂಡರು, ಯಾವ ಕಾರಣಕ್ಕಾಗಿ ಆತನನ್ನು ಕೊಲೆ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಅದರಲ್ಲಿ ಸೆರೆಯಾಗಿರುವ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಸ್ನೇಹಿತರೇ ಕೌಶಿಕ್‌ನನ್ನು ಕರೆಸಿಕೊಂಡು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿಯೂ ಸಹ ಪೊಲೀಸರು ತನಿಖೆ ಕೈಗೊಂಡು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.