ಬೆಂಗಳೂರು,ಸೆ.10- ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೊಂಡಿದ್ದು, ಚಾರ್ಜ್ಶೀಟ್ನಲ್ಲಿ ಬಿಜೆಪಿ ಕಚೇರಿ ಸ್ಪೋಟಿಸುವ ಬಗ್ಗೆ ಸಂಚು ನಡೆಸಿದ್ದರು ಎಂಬ ಅಂಶ ಉಲ್ಲೇಖಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರದ ತಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿರುವ ಮಿಕ್ಕ ವಿಚಾರಗಳು ಗೊತ್ತಿಲ್ಲ ಎಂದರು.ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ಶೀಟ್ನಲ್ಲಿ ಅಂಶ ಬಹಿರಂಗವಾಗುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ಅಪೋಸಿಟ್ ವಕೀಲರಿಗೂ ಚಾರ್ಜ್ಶೀಟ್ ನೀಡಲಾಗುತ್ತದೆ.
ಚಾರ್ಜ್ಶೀಟ್ ಗೌಪ್ಯ ದಾಖಲಾತಿ ಏನೂ ಅಲ್ಲ. ಅದನ್ನು ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ. ಸಹಜವಾಗಿ ಚಾರ್ಜ್ಶೀಟ್ನಲ್ಲಿ ಮಾಹಿತಿ ಹೊರಗೆ ಬರುತ್ತದೆ. ಕೋರ್ಟ್ ಏನು ತೀರ್ಮಾನ ಮಾಡುತ್ತದೆ ಕಾದು ನೋಡೋಣ ಎಂದು ಹೇಳಿದರು.
ಸಾರ್ವಜನಿಕವಾಗಿ ಮಾತನಾಡುವುದನ್ನು ಕೋರ್ಟ್ ಪರಿಗಣಿಸುವುದಿಲ್ಲ. ಸಾಕ್ಷ್ಯ, ದಾಖಲೆಗಳ ಆಧಾರದ ಮೇಲೆ ಪ್ರಕರಣ ನಡೆಯುತ್ತದೆ. ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿ, ಸಾಕ್ಷ್ಯಾಧಾರಗಳನ್ನು ಕೋರ್ಟ್ಗೆ ನೀಡುತ್ತಾರೆ. ಆ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಯುತ್ತದೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಹೇಳಿಕೆಗೆ ಕಡಿವಾಣ ಹಾಕಲು ಹೈಕಮಾಂಡ್ಗೆ ಪತ್ರ ಬರೆದಿರುವ ಕುರಿತು ಮಾತನಾಡಿ, ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಚರ್ಚೆ ಅನಗತ್ಯ ಎಂಬ ವಿಚಾರವನ್ನು ನಾನು ಸಹ ಹೇಳಿದ್ದೇನೆ. ಮಾಧ್ಯಮದವರು ಮುಖ್ಯಮಂತ್ರಿಯಾಗುತ್ತೀರ ಎಂದು ಕೇಳಿದಾಗ, ನಾವು ಬೇಡ ಎಂದು ಏಕೆ ಹೇಳಬೇಕು ಎಂದು ನನಗೆ ಆ ಸ್ನೇಹಿತರು ಹೇಳಿದ್ದಾರೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ ಎಂದು ಹೇಳಿದರು.
ಸಚಿವ ಎಂ.ಬಿ.ಪಾಟೀಲ್ ಅವರು ಇಲಾಖೆಯ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದಾರೆ. ನಾನು ಸಹ ಗೃಹ ಇಲಾಖೆಗೆ ಸಂಬಂಧಿಸಿದ ಕೆಲಸ ಇದ್ದರೆ ದೆಹಲಿಗೆ ಹೋಗುತ್ತೇನೆ. ಹೋದಾಕ್ಷಣ ಮುಖ್ಯಮಂತ್ರಿ ಹುದ್ದೆಗೆ ಲಾಭಿ ಮಾಡಲು ಹೋಗಿದ್ದರು ಅಂತ ಹೇಳಿ ಬಿಟ್ಟರೆ ಹೇಗೆ? ಈ ಬಗ್ಗೆ ಚರ್ಚೆಯೇ ಅನಗತ್ಯ ಎಂದರು.
ಬಿಜೆಪಿ ಕಚೇರಿಗೆ ಭದ್ರತೆ ಹೆಚ್ಚಳ :
ಸುರಕ್ಷತೆಯ ದೃಷ್ಟಿಯಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.ಮಲ್ಲೇಶ್ವರ ಬಿಜೆಪಿ ಕಚೇರಿ ಸ್ಫೋಟಕ್ಕೆ ಉಗ್ರರ ಸಂಚು ರೂಪಿಸಿದ ವಿಚಾರವು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಚಾರ್ಜ್ಶೀಟ್ನಲ್ಲಿ ಉಲ್ಲೇಖವಾದ ಬೆನ್ನಲ್ಲೇ ಬಿಜೆಪಿ ಕಚೇರಿ ಎದುರು ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ.
ಮೆಟಲ್ ಡಿಟೆಕ್ಟರ್ ಮೂಲಕವೇ ಬಿಜೆಪಿ ಕಚೇರಿಗೆ ಬರುವವರ ಒಳ ಪ್ರವೇಶ ಕಡ್ಡಾಯ ಮಾಡಲಾಗಿದೆ. ಇದರ ಜತೆಗೆ ಪ್ರವೇಶ ದ್ವಾರದ ಎದುರು 3-4 ಜನ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಲ್ಲೇಶ್ವರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್‌್ಸಪೆಕ್ಟರ್ಗಳು ಬಿಜೆಪಿ ಕಚೇರಿಗೆ ನಿತ್ಯ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಹೆಚ್ಚಿನ ಭದ್ರತೆಗೆ ಕಾರಣ:
ಅಯೋಧ್ಯೆಯಲ್ಲಿ ಬಾಲ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ದಿನವೇ ಬಿಜೆಪಿ ಕಚೇರಿಯಲ್ಲಿ ಬಾಂಬ್ ಸ್ಫೋಟಿಸುವ ಸಂಚನ್ನು ಐಸಿಸ್ ಶಂಕಿತ ಉಗ್ರರು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರ ಎನ್ಐಎ ತನಿಖೆಯಲ್ಲಿ ಬಯಲಾಗಿತ್ತು.
ಬ್ರೂಕ್ಫೀಲ್ಡ್ ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾದ ಮುಸ್ಸಾವಿರ್ ಹುಸೇನ್ ಶಾಜಿದ್, ಅಬ್ದುಲ್ ಮತೀನ್ ತಾಹ, ಮಾಜ್ ಮುನೀರ್ ಅಹಮದ್, ಮುಜಾಮಿಲ್ ಷರೀಫ್ ವಿರುದ್ಧ ಎನ್ಐಎ ಅಧಿಕಾರಿಗಳು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.