ಬೆಂಗಳೂರು,ಮೇ11- ನಗರದಲ್ಲಿ ಅಕ್ರಮ ಬ್ಯಾನರ್‌ಗಳ ಅಳವಡಿಕೆಯನ್ನು ಕಡ್ಡಾಯವಾಗಿ ನಿರ್ಬಂಧಿಸಿದರೂ ಸಹ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿ 2ನೇ ಹಂತದಲ್ಲಿ ಬ್ಯಾನರ್ ಅಳವಡಿಸಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕಾರ್ತಿಕ್ ವೆಂಕಟೇಶ್ ಮೂರ್ತಿ ಅವರಿಗೆ ಹುಟ್ಟಹಬ್ಬದ ಶುಭಾಷಯಗಳು ಎಂಬ ಬ್ಯಾನರ್‌ಗಳನ್ನು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕೆ.ಎಂ.ಪುಟ್ಟಲಿಂಗಯ್ಯ ರಸ್ತೆ, ದೇವೇಗೌಡ ಪೆಟ್ರೋಲ್ ಬಂಕ್ ವೃತ್ತದ ವಿವಿಧ ಕಡೆಗಳಲ್ಲಿ ಸಾರ್ವಜನಿಕ ರ ಸ್ವತ್ತಿಗೆ ಫ್ಲೆಕ್ಸ್ ಅಳವಡಿಸಲಾಗಿತ್ತು.
ಬಿಬಿಎಂಪಿಯ ಫ್ಲೈಯಿಂಗ್ ಸ್ಕ್ವಾಡ್ ತಂಡದ ನಾಯಕ ಅವೀಶ್.ಎಚ್.ಎಂ ಅವರು ಪರಿಶೀಲನೆ ನಡೆಸಿ ಅಕ್ರಮವಾಗಿ ಫ್ಲೆಕ್ಸ್ ಗಳನ್ನು ಅಳವಡಿಸಿರುವುದು ಕಂಡುಬಂದ ಹಿನ್ನಲೆಯಲ್ಲಿ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಕ್ರಮ ಮತ್ತು ಅನಧಿಕೃತ ಬ್ಯಾನರ್‌ಗಳು ಸಾರ್ವಜನಿಕ ಆಸ್ತಿ ವಿರೂಪ ಕಾಯ್ದೆ ಮತ್ತು ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಯಾವ ಪ್ರದೇಶದಲ್ಲಾದರೂ ಅನಧಿಕೃತ ಪೋಸ್ಟರ್, ಬ್ಯಾನರ್‌ಗಳನ್ನು ಹಾಕಿದರೆ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತದೆ.
ನಗರದಲ್ಲಿ ಅಕ್ರಮ ಬ್ಯಾನರ್‌ಗಳು ಪ್ರದರ್ಶನದ ಬಗ್ಗೆ ಸಾರ್ವಜನಿಕರು ಫೋಟೋ ಸಮೇತ ವಾಟ್ಸಪ್ ಸಂಖ್ಯೆ 9480685700ಗೆ ಕಳುಹಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.