ಬೆಂಗಳೂರು,ನ.9- ಪರಪ್ಪನ ಅಗ್ರಹಾರ ಜೈಲಿನ ಕರಾಮತ್ತೇ ಯಾರಿಗೂ ಆರ್ಥವಾಗುತ್ತಿಲ್ಲ. ಈ ಜೈಲಿನಲ್ಲಿ ನಡೆಯಬಾರದ್ದೆಲ್ಲಾ ನಡೆಯುತ್ತದೆ. ಹುಡುಕಿದರೆ ಮಾತ್ರ ಏನೂ ಸಿಗೋಲ್ಲ. ಹೀಗಾಗಿ ಇದು ಜೈಲೋ ಆಥವಾ ಮಾಯಾಲೋಕವೋ ಎಂಬ ಅನುಮಾನ ಕಾಡುವಂತಾಗಿದೆ. ಹಾಸಿಗೆ, ಬೆಡ್ಶೀಟ್ ನೀಡುತ್ತಿಲ್ಲ ಎಂದು ಚಿತ್ರನಟ ದರ್ಶನ್ ಬೊಬ್ಬೆ ಹೊಡೆದುಕೊಳ್ಳುತ್ತಿದ್ದರೆ ಮತ್ತೊಂದು ಕಡೆ ವಿಕೃತಕಾಮಿ ಉಮೇಶ್ ರೆಡ್ಡಿ, ಐಸಿಸ್ ಉಗ್ರನೊಬ್ಬ ಜೈಲಿನಲ್ಲೇ ಮೊಬೈಲ್ ಬಳಸುತ್ತಿರುವ ದೃಶ್ಯಗಳು ವೈರಲ್ ಆಗಿ ಭಾರೀ ಸಂಚಲನ ಮೂಡಿಸಿತ್ತು. ಆದರೆ, ಪರಿಶೀಲನೆ ಸಂದರ್ಭದಲ್ಲಿ ಜೈಲಿನಲ್ಲಿ ಏನೂ ಸಿಕ್ಕಿಲ್ಲ. ಉಮೇಶ್ ರೆಡ್ಡಿ ಹಾಗೂ ಐಸಿಸ್ ಉಗ್ರನ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜೈಲಿನ ಅಧಿಕಾರಿಗಳು 100ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ದಿಢೀರನೆ ಅಲ್ಲಿನ ಎಲ್ಲ ಬ್ಯಾರಕ್ಗಳ ಪರಿಶೀಲನೆ ನಡೆಸಿದರು ಯಾವುದೇ ವಸ್ತುಗಳು ಪತ್ತೆಯಾಗಿಲ್ಲ.
ಒಂದು ದಿನದ ಮುಂಚೆ ಉಮೇಶ್ ರೆಡ್ಡಿ ಮತ್ತು ಉಗ್ರನ ಬಳಿ ಇದ್ದ ಮೊಬೈಲ್ಗಳು ಒಂದೇ ದಿನದಲ್ಲಿ ಮಾಯಾವಾಗಲು ಹೇಗೆ ಸಾಧ್ಯ ಎಂದು ಜೈಲು ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಇದರ ಜೊತೆಗೆ ಜೈಲಿನ ಕೆಲ ಸಿಬ್ಬಂದಿಗಳೇ ಕೈದಿಗಳೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಸುವ ಸಾಧ್ಯತೆಗಳಿವೆ. ಜೈಲಲ್ಲಿ ದುಡ್ಡಿದವರದ್ದೇ ದುನಿಯಾ: ಪರಪ್ಪನ ಅಗ್ರಹಾರದ ಜೈಲಿನಲ್ಲಿ ದುಡ್ಡಿದವರದ್ದೇ ದುನಿಯಾ ಎನ್ನುವಂತಾಗಿದೆ. ಈ ಹಿಂದೆ ಗುಬ್ಬಚ್ಚಿ ಸೀನ ಎಂಬಾತ ಜೈಲಿನಲ್ಲೇ ಮಸ್ತ್ ಬರ್ತ್ಡೇ ಪಾರ್ಟಿ ಮಾಡಿಕೊಂಡಿದ್ದ. ಅದೇ ರೀತಿ ಕೊಲೆ ಆರೋಪದಲ್ಲಿ ಜೈಲಿನಲ್ಲಿದ್ದ ಚಿತ್ರನಟ ದರ್ಶನ್ ರೌಡಿಶೀಟರ್ ವಿಲ್ಸನ್ಗಾರ್ಡನ್ ನಾಗ ಎಂಬಾತನೊಂದಿಗೆ ಚೇರಿನಲ್ಲಿ ಕುಳಿತು ಧಮ್ ಎಳೆಯುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು.
ಇದರ ಜೊತೆಗೆ ಜೈಲಿನ ವಾರ್ಡನ್ ಒಬ್ಬರ ಬಳಿ ಮೊಬೈಲ್ ಪತ್ತೆಯಾಗಿತ್ತು. ಮಾತ್ರವಲ್ಲ ಕೆಲ ರೌಡಿಗಳು ಜೈಲಿನಿಂದಲೇ ಹೊರಗಿನವರಿಗೆ ಪೋನ್ನಲ್ಲಿ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದನ್ನೆಲ್ಲಾ ನೋಡಿದರೆ ಪರಪ್ಪನ ಅಗ್ರಹಾರದ ಜೈಲಿನಲ್ಲಿ ದುಡ್ಡಿದವರದ್ದೇ ದುನಿಯಾ ಎನ್ನುವಂತಾಗಿದೆ. ಮರದಕೊಂಬೆಗಳು, ಟಾಯ್ಲೆಟ್ನಲ್ಲಿ ಮೊಬೈಲ್ಗಳು: ಜೈಲಿನಲ್ಲಿರುವ ಕೈದಿಗಳು ವಾರ್ಡನ್ಗಳ ಕೈ ಬಿಸಿ ಮಾಡಿದರೆ ಅವರಿಗೆ ಬೇಕಾದ ಎಲ್ಲ ಸವಲತ್ತುಗಳು ಸಿಗುತ್ತವೆ ಎಂಬ ಆರೋಪಗಳು ಇಲ್ಲಿ ಮಾಮೂಲಾಗಿದೆ. ಜೈಲು ಅಧಿಕಾರಿಗಳು ಬ್ಯಾರಕ್ ಪರಿಶೀಲನೆಗೆ ಬರುವ ಬಗ್ಗೆ ಅಲ್ಲಿನ ಸಿಬ್ಬಂದಿಗಳೇ ಕೈದಿಗಳಿಗೆ ಮಾಹಿತಿ ನೀಡುವುದರಿಂದ ಕೈದಿಗಳು ತಮ ಬಳಿ ಇರುವ ಮೊಬೈಲ್ಗಳು ಪ್ಲಾಸ್ಟಿಕ್ ಕವರ್ನಲ್ಲಿಟ್ಟು ಟಾಯ್ಲೆಟ್ ಟಬ್ಗೆ ದಾರ ಕಟ್ಟಿ ಬಿಡುವುದು, ತಮ ಬ್ಯಾರಕ್ ಸಮೀಪದ ಮರದ ಕೊಂಬೆಗಳಿಗೆ ಕಟ್ಟುವುದು ಈ ಹಿಂದೆ ಕಂಡು ಬಂದಿತ್ತು.
ಈ ಘಟನೆ ನಂತರ ಪರಿಶೀಲನೆ ಸಂದರ್ಭದಲ್ಲಿ ಜೈಲು ಅಧಿಕಾರಿಗಳು ಟಾಯ್ಲೆಟ್ ಅನ್ನು ಶೋಧ ಮಾಡುತ್ತಿದ್ದರೂ ಕೈದಿಗಳ ಬಳಿ ಇರುವ ವಸ್ತುಗಳು ಮಾತ್ರ ಕೈಗೆ ಸಿಗುತ್ತಿಲ್ಲ. ಇದನ್ನು ನೋಡಿದರೆ ಪರಪ್ಪನ ಅಗ್ರಹಾರದ ಬಂಧೀಖಾನೆ ಮಾಯಾ ಲೋಕವಿರಬಹುದೇ ಎಂಬ ಅನುಮಾನ ಕಾಡುವಂತಾಗಿದೆ. ಜಾಮರ್ ವರ್ಕ್ ಆಗುವುದಿಲ್ಲವೇ?: ಪರಪ್ಪನ ಅಗ್ರಹಾರದ ಬಂಧೀಖಾನೆಯಲ್ಲಿ ಜಾಮರ್ ಅಳವಡಿಸಿರುವುದರಿಂದ ಆ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಿಗಲ್ಲ ಎನ್ನುವುದು ಅಲ್ಲಿನ ಸ್ಥಳೀಯ ನಿವಾಸಿಗಳ ಆರೋಪವಾಗಿದೆ. ಇಂತಹ ಸಂದರ್ಭದಲ್ಲಿ ಜೈಲಿನ ಒಳಗಡೆ ಇರುವ ಕೈದಿಗಳ ಫೋನ್ಗಳಿಗೆ ಮಾತ್ರ ನೆಟ್ವರ್ಕ್ ಹೇಗೆ ಸಿಗುತ್ತದೆ ಎನ್ನುವುದೇ ಯಾರಿಗೂ ಆರ್ಥವಾಗುತ್ತಿಲ್ಲ.
ಗರಂ: ಕೈದಿಗಳು ಹಾಗೂ ಉಗ್ರರಿಗೆ ಪರಪ್ಪನ ಅಗ್ರಹಾರ ಬಂಧೀಖಾನೆ ಸ್ವರ್ಗವಾಗಿ ಮಾರ್ಪಡುತ್ತಿದೆ ಎಂಬ ಸುದ್ದಿಯಿಂದ ಗರಂ ಆಗಿರುವ ಗೃಹ ಸಚಿವ ಪರಮೇಶ್ವರ್ ಅವರು ಜೈಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸೂಚಿಸಿರುವುದೇ ಅಲ್ಲದೆ ಪ್ರಕರಣ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಆದೇಶಿದ್ದಾರೆ.
