ಬೆಂಗಳೂರು, ಮೇ.15- ವಾಯುವಿಹಾರದ ನೆಪದಲ್ಲಿ ವೃದ್ಧೆಯನ್ನು ಹಿಂಬಾಲಿಸಿಕೊಂಡು ಬಂದ ಸರಗಳ್ಳ 38 ಗ್ರಾಂ ಸರ ಅಪಹರಿಸಿ ಪರಾರಿಯಾಗಿರುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮಾರೇನಹಳ್ಳಿಯ 60 ವರ್ಷದ ವೃದ್ಧೆಯೊಬ್ಬರು ಎಂದಿನಂತೆ ಇಂದು ಬೆಳಿಗ್ಗೆ 6.15ರ ಸುಮಾರಿನಲ್ಲಿ ಎಂ ಸಿ ಲೇಔಟ್ ನ 12ನೇ ಕ್ರಾಸ್‌ನಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ವೃದ್ಧೆಯನ್ನು ಹಿಂಬಾಲಿಸಿಕೊಂಡು ವಾಯುವಿಹಾರ ಮಾಡುವಂತೆ ಬರುತ್ತಿದ್ದ ಸರಗಳ ಸಮಯ ಸಾಧಿಸಿ ವೃದ್ಧೆಯ ಕೊರಳಿನಲ್ಲಿದ್ದ 38 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾನೆ.
ತಕ್ಷಣ ವೃದ್ಧೆ ಸಹಾಯಕ್ಕಾಗಿ ಕೂಗಿಕೊಂಡರಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಗೋವಿಂದರಾಜನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಸರಗಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.