Tuesday, January 7, 2025
Homeರಾಜ್ಯಮನಸೂರೆಗೊಂಡ ಚಿತ್ರಸಂತೆ, ಮನೆಗೊಂದು ಕಲಾಕೃತಿ ಖರೀದಿಸುವಂತೆ ಸಿಎಂ ಮನವಿ

ಮನಸೂರೆಗೊಂಡ ಚಿತ್ರಸಂತೆ, ಮನೆಗೊಂದು ಕಲಾಕೃತಿ ಖರೀದಿಸುವಂತೆ ಸಿಎಂ ಮನವಿ

Bengaluru Chitra Santhe: CM Siddaramaiah launches the annual art fair

ಬೆಂಗಳೂರು,ಡಿ.28– ಚಿತ್ರಕಲಾ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ 22ನೇ ಚಿತ್ರಸಂತೆಯು ಕಲಾಸಕ್ತರ ಮನಸೂರೆಗೊಂಡಿತ್ತು. ವೈವಿದ್ಯಮಯವಾದ ಚಿತ್ರಕಲೆಗಳನ್ನು ವೀಕ್ಷಿಸಲು ಜನರ ದಂಡೇ ಆಗಮಿಸಿತ್ತು. ಕೆಲವರು ತಮಗಿಷ್ಟವಾದ ಕಲಾಕೃತಿಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಚಿತ್ರಕಲಾ ಪರಿಷತ್ ಆವರಣ ಹಾಗೂ ಮುಂಭಾಗದ ರಸ್ತೆಗಳಲ್ಲಿ ಚಿತ್ರ ಸಂತೆ ಆಯೋಜಿಸಲಾಗಿತ್ತು. ಶಿವ, ಪಾರ್ವತಿ, ಕೃಷ್ಣ ಸೇರಿದಂತೆ ದೇವರ ಚಿತ್ರಗಳು, ನಿಸರ್ಗ ಸೌಂದರ್ಯ ವರ್ಣೀತ ಚಿತ್ರಗಳು, ಆನೆ ಸೇರಿದಂತೆ ಅನೇಕ ವನ್ಯ ಜೀವಿಗಳ ಚಿತ್ರಗಳು ಸಾಕಷ್ಟಿದ್ದವು. ವೈವಿದ್ಯಮಯವಾಗಿದ್ದ ಚಿತ್ರಗಳನ್ನು ನೋಡಲು ಮಕ್ಕಳು, ಮಹಿಳೆಯರು ಸೇರಿದಂತೆ ಕಲಾರಸಿಕರು ಮುಗಿಬಿದ್ದಿದರು.

ಚಿತ್ರ ಸಂತೆಯಲ್ಲಿ ಮೈಸೂರು ಸಾಂಪ್ರದಾಯಿಕ ಶೈಲಿ, ರಾಜಸ್ಥಾನಿ ಶೈಲಿ, ಮಧು ಬನಿಯ ಶೈಲಿ, ತೈಲ ಮತ್ತು ಜಲವರ್ಣದ ಕಲಾ ಕೃತಿಗಳು ಪ್ರದರ್ಶನಗೊಂಡಿದ್ದವು. ಅಲ್ಲದೆ, ಕುಂಚ ಅಥವಾ ಪೆನ್ಸಿಲ್ ಗಳಿಂದ ಕಲಾ ರಸಿಕರ ಭಾವಚಿತ್ರಗಳನ್ನು ಸ್ಥಳದಲ್ಲಿ ರಚಿಸಿಕೊಡುವ ಕಲಾವಿದರು ಇದ್ದರು. ವ್ಯಂಗ್ಯ ಚಿತ್ರಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿತ್ತು.

22 ವಿವಿಧ ರಾಜ್ಯಗಳ ಸುಮಾರು 1550 ಕಲಾವಿದರು ತಮ ಕಲಾಕೃತಿಗಳನ್ನು ಪ್ರದರ್ಶಿಸಿದರು. 1450 ಮಳಿಗಳಲ್ಲಿ 40 ಸಾವಿರಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶನಗೊಂಡವು. ನೂರು ರೂ.ಗಳಿಂದ ಲಕ್ಷದ ವರೆಗಿನ ಮೌಲ್ಯಗಳ ಕಲಾ ಕೃತಿಗಳು ಪ್ರದರ್ಶನದಲ್ಲಿದ್ದವು.

ಐಟಿ ಸಿಟಿ, ಉದ್ಯಾನ ನಗರಿ ಸೃಜನಾತಕ ಕಲಾಕೃತಿಗಳ ವೇದಿಕೆ ಇಂದಿನ ಚಿತ್ರ ಸಂತೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಗಣ್ಯರು ಚಿತ್ರ ಕಲೆಯನ್ನು ವೀಕ್ಷಿಸಿ ಕಲಾವಿದರನ್ನು ಹುರಿದುಂಬಿಸಿದರು.ಬೆಳಿಗ್ಗೆಯಿಂದಲೇ ಕುಮಾರ ಕೃಪಾ ರಸ್ತೆಯ ಉದ್ದಗಲಕ್ಕೂ ಮನಮೋಹಕ ಚಿತ್ರಗಳ ಪ್ರದರ್ಶನ, ಬಣ್ಣದ ಲೋಕವೇ ಅನಾವರಣಗೊಂಡಿತ್ತು.

ಕಲಾಕೃತಿ ಖರೀದಿಸಿ ಕಲಾವಿದರ ಬೆಂಬಲಿಸಿ: ಸಿಎಂ
ಮನೆಗೆ ಒಂದು ಕಲಾಕೃತಿಯನ್ನು ಅಳವಡಿಸುವ ಮೂಲಕ ಕಲಾವಿದರಿಗೆ ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕ್ಯಾನ್ವಾಸ್ನಲ್ಲಿ ಚಿತ್ರಸಂತೆಯ ಸಂಕ್ಷಿಪ್ತ ಮಾಹಿತಿ ಮತ್ತು ದಿನಾಂಕವನ್ನು ಕನ್ನಡದಲ್ಲೇ ಬರೆದು ಸಹಿ ಹಾಕುವ ಮೂಲಕ 22ನೇ ಚಿತ್ರ ಸಂತೆಯನ್ನು ಉದ್ಘಾಟಿಸಿದ ಅವರು, ಜಗತ್ತಿನಲ್ಲಿ ಎಲ್ಲಿಯೂ ಈ ರೀತಿಯ ಕಾರ್ಯಕ್ರಮ ನಡೆದಿಲ್ಲ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿಗೆ ಇದು ಹೆಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಚಿತ್ರಸಂತೆಯಲ್ಲಿ 22 ರಾಜ್ಯಗಳ ಕಲಾವಿದರು ಭಾಗವಹಿಸಿದ್ದಾರೆ. ಅನೇಕ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟು, ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವ ಚಿತ್ರಸಂತೆ ಕಲಾಕೃತಿಗಳ ಖರೀದಿಗೂ ಅವಕಾಶ ನೀಡಿದೆ. ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಚಿತ್ರಸಂತೆಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದರು.

ಈ ಬಾರಿಯ ಚಿತ್ರ ಸಂತೆಯನ್ನು ಹೆಣ್ಣು ಮಕ್ಕಳಿಗೆ ಸಮರ್ಪಣೆ ಮಾಡಲಾಗಿದೆ. ಸಮಾಜ ಸುಧಾರಣೆಗೆ ಶ್ರಮಿಸಿದವರ ಚಿತ್ರಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಗಣ್ಯರು ಸಮಾಜ ಹಾಗೂ ಮಹಿಳಾ ಸಬಲೀಕರಣಕ್ಕೆ ಯಾವ ರೀತಿಯ ಸೇವೆ ಸಲ್ಲಿಸಿದರು ಎಂಬುದನ್ನು ಸಾರಲಾಗುತ್ತಿದೆ ಎಂದು ಹೇಳಿದರು.

ಹೆಣ್ಣುಮಕ್ಕಳು ಶೋಷಣೆ, ಅನ್ಯಾಯ ಹಾಗೂ ತಾರತಮ್ಯಕ್ಕೆ ಒಳಗಾಗಿದ್ದಾರೆ. ಅವರ ಸಬಲೀಕರಣಕ್ಕಾಗಿ ನಮ ಸರ್ಕಾರ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿ ಮಾಡಿದೆ. ಹೆಣ್ಣು ಮಕ್ಕಳ ಬಳಿ ಹಣ ಉಳಿತಾಯವಾದರೆ ಸಮಾಜದ ಆರ್ಥಿಕ ಶಕ್ತಿ ವೃದ್ಧಿಸಲಿದೆ ಎಂದರು.
ಚಿತ್ರಸಂತೆಯ ಕ್ಯಾನ್ವಸ್ನಲ್ಲಿ ಸಂವಿಧಾನ ಪೀಠಿಕೆಯನ್ನು ಅಳವಡಿಸಲಾಗಿದೆ. ಜೊತೆಗೆ ಸಮಾಜದ ಪ್ರತಿಯೊಂದು ವರ್ಗದ ಜನರನ್ನು ಪ್ರತಿನಿಧಿಸುವ ಕಲಾಕೃತಿ ರಚನೆಯಿದೆ. ಒಂದು ಚಿತ್ರ ಸಾವಿರ ಪದಗಳಿಗೂ ಮೀರಿದ ಅರ್ಥವನ್ನು ಅಭಿವ್ಯಕ್ತಿಸುವ, ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿದೆ ಎಂದು ಹೇಳಿದರು.

ಕಲಾಕೃತಿ ಮೂಲಕ ಜನಜೀವನ, ಬದುಕು, ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಬಿಂಬಿಸಲು ಸಾಧ್ಯ. ರಾಜ್ಯದ ನಾಗರೀಕರು ಚಿತ್ರಸಂತೆಯನ್ನು ನೋಡಿ ಸಂತೋಷ ಪಟ್ಟು, ಕಲಾಕೃತಿಗಳನ್ನು ಖರೀದಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಮನೆಗೆ ಒಂದು ಕಲಾಕೃತಿ ಇರಬೇಕು ಎಂದು ಕರೆ ನೀಡಿದರು.

ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಚಿವರಾದ ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಶಾಸಕರಾದ ಪೊನ್ನಣ್ಣ, ಸಂಸದ ಪಿ.ಸಿ.ಮೋಹನ್, ಮುಖಂಡರಾದ ಹೆಚ್.ಎಂ.ರೇವಣ್ಣ, ರಾಣಿಸತೀಶ್, ನಾಗರಾಜ್ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.ಚಿತ್ರಸಂತೆಗಾಗಿ ವಿಂಡ್ಸರ್ ಮ್ಯಾನರ್ ನಿಂದ ಶಿವಾನಂದ ವೃತ್ತದವರೆಗೂ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಕಲಾಕೃತಿಗಳ ಪ್ರದರ್ಶನ ಮಾಡಲಾಗಿತ್ತು.

RELATED ARTICLES

Latest News