Tuesday, July 2, 2024
Homeರಾಷ್ಟ್ರೀಯಸನಾತನ ಧರ್ಮ ಅವಹೇಳನ : ಉದಯನಿಧಿ ಸ್ಟಾಲಿನ್‌ಗೆ ಜಾಮೀನು ನೀಡಿದ ಬೆಂಗಳೂರು ಕೋರ್ಟ್

ಸನಾತನ ಧರ್ಮ ಅವಹೇಳನ : ಉದಯನಿಧಿ ಸ್ಟಾಲಿನ್‌ಗೆ ಜಾಮೀನು ನೀಡಿದ ಬೆಂಗಳೂರು ಕೋರ್ಟ್

ಬೆಂಗಳೂರು, ಜೂ.25- ಸನಾತನ ಧರ್ಮ ಕುರಿತು ವಿವಾದಾತಕ ಹೇಳಿಕೆ ನೀಡಿದ ಆರೋಪದಲ್ಲಿ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಉದಯನಿಧಿ ಅವರು ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ನೀಡಿತು. ಕಳೆದ ವರ್ಷ ಸೆಪ್ಟೆಂಬರ್ 4 ರಂದು ಚೆನ್ನೈನ ತೇನಂಪೇಟೆಯಲ್ಲಿ ನಡೆದಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದ ಉದಯನಿಧಿ, ಸನಾತನ ಧರ್ಮ ಡೆಂಘಿ, ಮಲೇರಿಯಾ ಹಾಗೂ ಕೊರೋನಾ ಇದ್ದಂತೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಅದು ವಿರುದ್ಧವಾಗಿದೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಖಂಡಿಸಿದ್ದ ಅನೇಕ ಹಿಂದೂಪರ ಸಂಘಟನೆಗಳು, ಮುಖಂಡರು ಕ್ಷಮೆ ಯಾಚನೆಗೆ ಆಗ್ರಹಿಸಿದ್ದರು.

ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪರಮೇಶ್ವರ್ ಎಂಬುವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಖುದ್ದು ಹಾಜರಾತಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಇಂದು ಹಾಜರಾದ ಅವರು ವಿಚಾರಣೆ ಎದುರಿಸಿದರು.

ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಹಾಗೂ ವಿಚಾರಣೆಯನ್ನು ಮುಂದೂಡುವಂತೆ ಅವರ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಆಗಸ್ಟ್ 8 ಕ್ಕೆ ವಿಚಾರಣೆಯನ್ನು ಮುಂದೂಡಿತು. ಉದಯನಿಧಿ ಸ್ಟಾಲಿನ್ ಆಗಮನದ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

RELATED ARTICLES

Latest News