Friday, November 22, 2024
Homeಬೆಂಗಳೂರುಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ : ಡಿಕೆಶಿ

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ : ಡಿಕೆಶಿ

ಬೆಂಗಳೂರು,ಮಾ.9- ಮಹಾನಗರಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಭರವಸೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಿನ ಸಮಸ್ಯೆ ಪರಿಹಾರಕ್ಕೆ ಇದೇ ಮೊದಲ ಬಾರಿಗೆ ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದ್ದೇವೆ.

ಮೊಟ್ಟಮೊದಲ ಬಾರಿಗೆ ಎಲ್ಲಾ ನೀರಿನ ಟ್ಯಾಂಕರ್‍ಗಳನ್ನು ಬಿಬಿಎಂಪಿ ವಶಪಡಿಸಿಕೊಂಡು ಸರ್ಕಾರದಿಂದಲೇ ನೀರು ಪೂರೈಸಲಾಗುತ್ತಿದೆ. ಈ ಮೂಲಕ ಟ್ಯಾಂಕರ್ ಮಾಫಿಯಾವನ್ನು ನಿಯಂತ್ರಿಸಲಾಗಿದೆ ಎಂದರು. ನಗರದಲ್ಲಿ ಖಾಸಗಿ ಹಾಗೂ ಸರ್ಕಾರಿ ಒಡೆತನದ ಅರ್ಧದಷ್ಟು ಬೋರ್‍ವೆಲ್‍ಗಳು ಬತ್ತಿ ಹೋಗಿವೆ. ಎಲ್ಲೆಲ್ಲಿ ಅಂತರ್ಜಲ ಲಭ್ಯವಿದೆಯೋ, ಎಲ್ಲೆಲ್ಲಿ ನೀರು ದೊರೆಯುತ್ತಿದೆಯೋ ಅಲ್ಲಿಂದ ಟ್ಯಾಂಕರ್ ಮೂಲಕ ತಂದು ಬೆಂಗಳೂರಿಗೆ ಪೂರೈಸಲಾಗುತ್ತಿದೆ. ಬೆಂಗಳೂರಷ್ಟೇ ಅಲ್ಲ ರಾಜ್ಯಾದ್ಯಂತ ಲಭ್ಯವಿರುವ ಕಡೆಗಳಿಂದೆಲ್ಲಾ ಟ್ಯಾಂಕರ್‍ಗಳನ್ನು ತರಿಸಿಕೊಂಡು ಬೆಂಗಳೂರಿನಲ್ಲಿ ನೀರು ಪೂರೈಕೆಗೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕಾವೇರಿ ನೀರು ನಿಯಮಿತವಾಗಿ ಬರುತ್ತಿದೆ. ಪರಿಸ್ಥಿತಿ ಬೇಡಿಕೆ ಆಧರಿಸಿ ಅಗತ್ಯಕ್ಕಿಂತಲೂ ಹೆಚ್ಚಿನದಾಗಿಯೇ ಪೂರೈಸಲಾಗುತ್ತದೆ. 0.25 ಎಂಎಲ್‍ಡಿ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು ಎಂದು ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದರು. ಕಾವೇರಿಯ 5ನೇ ಹಂತದ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದು, ಶೀಘ್ರವೇ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೂ ಕಾವೇರಿ ನೀರನ್ನು ಪೂರೈಸುವುದಾಗಿ ಹೇಳಿದರು.

ನೀರಿನ ಹಾಹಾಕಾರ ಇರುವುದು ನಿಜ. ಬೋರ್‍ವೆಲ್‍ಗಳು ಬತ್ತಿ ಹೋಗಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ. ನನ್ನ ಮನೆಯಲ್ಲೂ ಬೋರ್‍ವೆಲ್ ಬತ್ತಿ ಹೋಗಿದೆ. ಹುಟ್ಟೂರಿನಲ್ಲೂ ನೀರಿನ ಸಮಸ್ಯೆಯಿದೆ. ಇದು ಒಬ್ಬರ ಸಮಸ್ಯೆ ಅಲ್ಲ. ರಾಜ್ಯಾದ್ಯಂತ ಉದ್ಭವಿಸಿದೆ. ಜನ ಆತಂಕಗೊಳ್ಳುವ ಅಗತ್ಯವಿಲ್ಲ. ರಾಜ್ಯಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದರು. ಬೆಂಗಳೂರಿನ ಜನರಿಗೆ ನೀರಿನ ಬೆಲೆ ಗೊತ್ತಾಗಬೇಕು. ನೀರು ಜೀವನಾವಶ್ಯಕ. ಹೀಗಾಗಿ ಕಾವೇರಿ ನೀರನ್ನು ಕುಡಿಯುವುದಕ್ಕೋಸ್ಕರ ಮಾತ್ರ ಬಳಸಬೇಕು. ಅದನ್ನು ಕಾರು ಸ್ವಚ್ಛತೆ, ಉದ್ಯಾನವನ ಅಭಿವೃದ್ಧಿಗೆ ಬಳಸಬೇಡಿ. ಆ ಉದ್ದೇಶಗಳಿಗೆ ಬೇರೆ ನೀರಿದೆ, ಅದನ್ನುಉಪಯೋಗಿಸಿ, ಜನ ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನೀರಿನ ಸಮಸ್ಯೆ ಉಂಟಾಗಿದೆ ಎಂಬ ಕಾರಣಕ್ಕಾಗಿಯೇ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ರೂಪಿಸಲಾಗಿತ್ತು ಎಂದ ಅವರು, ಟ್ಯಾಂಕರ್‍ಗಳು ಕಾವೇರಿ ಅಥವಾ ಸರ್ಕಾರದ ನೀರನ್ನು ಮಾರಾಟ ಮಾಡಿಕೊಳ್ಳುತ್ತಿಲ್ಲ. ಬೋರ್‍ವೆಲ್ ನೀರನ್ನು ಸರಬರಾಜು ಮಾಡುತ್ತಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸರ್ಕಾರ ನೀರಿನ ಸಮಸ್ಯೆ ನಿವಾರಣೆಗೆ ಹಳೆಯ ಬೋರ್‍ವೆಲ್‍ಗಳನ್ನು ದುರಸ್ಥಿಗೊಳಿಸುವುದು, ಸಹಾಯವಾಣಿಗಳ ಕಾರ್ಯ ನಿರ್ವಹಣೆ ಸುಸ್ಥಿತಿಯಲ್ಲಿಡುವುದೂ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ ಎಂದರು.

ಕುಮಾರಸ್ವಾಮಿ ನಡವಳಿಕೆ ಬೇಸರ ತರಿಸಿದೆ :
ರಾಜ್ಯ ರಾಜಕಾರಣದ ಬೆಳವಣಿಗೆ ಅತ್ಯಂತ ಬೇಸರ ತರಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಕಾಂಗ್ರೆಸಿಗರು ಯಾವತ್ತೂ ಕುಮಾರಸ್ವಾಮಿಯವರ ಸರ್ಕಾರವನ್ನು ಪತನಗೊಳಿಸಲು ಯತ್ನಿಸಿರಲಿಲ್ಲ ಎಂದು ಹೇಳಿದರು. ಬಿಜೆಪಿಯವರು ಕುಮಾರಸ್ವಾಮಿಯವರ ಸರ್ಕಾರವನ್ನು ಕಿತ್ತುಹಾಕಿದ್ದರು. ಈಗ ಅದೇ ಬಿಜೆಪಿಯೊಂದಿಗೆ ಕುಮಾರಸ್ವಾಮಿ ಮೈತ್ರಿ ರಾಜಕಾರಣ ಮಾಡುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ವಿರೋಧಿಸಿದ್ದ ಕುಮಾರಸ್ವಾಮಿ, ಮತ್ತೊಂದು ಚುನಾವಣೆ ವೇಳೆಗೆ ಬಿಜೆಪಿಯನ್ನೇ ತಬ್ಬಿಕೊಳ್ಳುತ್ತಿದ್ದಾರೆ. ಇದು ಯಾವ ಸೈದ್ಧಾಂತಿಕತೆ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಕಾರ್ಯಕ್ರಮಗಳನ್ನು ತಮ್ಮದೇ ಕಾರ್ಯಕ್ರಮ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹಿಂದೆಲ್ಲಾ ಯಾವ ರೀತಿ ಟೀಕೆ ಮಾಡಿದ್ದರು. ಈಗ ಹೇಗೆ ಅದನ್ನೆಲ್ಲಾ ಜೀರ್ಣಿಸಿಕೊಳ್ಳುತ್ತಾರೆ ಎಂಬುದನ್ನು ರಾಜ್ಯದ ಜನರೇ ನಿರ್ಧರಿಸಬೇಕು ಎಂದರು.

ಬಿಜೆಪಿಯ ಅಭ್ಯರ್ಥಿಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಕಾರ್ಯಕ್ರಮ ಮತ್ತು ಸಿದ್ಧಾಂತಗಳ ಮೇಲೆ ಚುನಾವಣೆ ನಡೆಸುತ್ತೇವೆ. ಎರಡು ದಿನಗಳ ಬಳಿಕ ಮತ್ತೊಂದು ಸುತ್ತಿನ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ಅಲ್ಲಿ ರಾಜ್ಯದಲ್ಲಿ ಬಾಕಿ ಉಳಿದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಿ ಕಾಂಗ್ರೆಸ್ ಹೈಕಮಾಂಡ್‍ಗೆ ರವಾನಿಸಲಾಗುವುದು ಎಂದು ತಿಳಿಸಿದರು.

RELATED ARTICLES

Latest News