ಬೆಂಗಳೂರು,ಆ.18– ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಊರಿಗೆ ತೆರಳಿ ವಾಪಸ್ಸಾಗುತ್ತಿದ್ದ ಜನರು ಬೆಳ್ಳಂಬೆಳಿಗ್ಗೆ ಸಂಚಾರದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಗಿತ್ತು.ಸ್ವಾತಂತ್ರ್ಯ ದಿನಾಚರಣೆ ಹಾಗೂ ಶನಿವಾರ, ಭಾನುವಾರ ವೀಕೆಂಡ್ ರಜೆ ಹಿನ್ನೆಲೆಯಲ್ಲಿ ಬಹುತೇಕ ಜನರು ಊರು, ದೇವಸ್ಥಾನ ಹಾಗೂ ಪ್ರವಾಸಿತಾಣಗಳಿಗೆ ತೆರಳಿದ್ದು, ರಾತ್ರಿಯಿಂದಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಮಳೆಯಿಂದಾಗಿ ಕೆಲವರು ಇಂದು ಬೆಳಿಗ್ಗೆ ನಗರಕ್ಕೆ ತೆರಳುತ್ತಿದ್ದರು.
ಹಾಸನ, ಮಂಗಳೂರು, ಕುಣಿಗಲ್, ತುಮಕೂರು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಶಿವಮೊಗ್ಗ, ಧರ್ಮಸ್ಥಳ, ಚಿಕ್ಕಮಗಳೂರು ಕಡೆಯಿಂದ ಬಂದ ವಾಹನಗಳು ನೆಲಮಂಗಲದ ಕುಣಿಗಲ್ ಬೈಪಾಸ್‌ನಲ್ಲಿ ಒಟ್ಟಿಗೆ ಸೇರಿದ್ದರಿಂದ ಸಂಚಾರದಟ್ಟಣೆ ಉಂಟಾಗಿತ್ತು.
ಮಾದಾವರ ಜಂಕ್ಷನ್‌ನಲ್ಲೂ ಟ್ರಾಫಿಕ್ ಉಂಟಾಗಿದ್ದು ಕೆಲವರು ಕೆಲಸಕಾರ್ಯಗಳಿಗೆ ತೆರಳಲು ತಡವಾಗುತ್ತದೆ ಎಂದು ಅಲ್ಲಿಯೇ ಬಸ್ ಇಳಿದು ಮೆಟ್ರೋದತ್ತ ಮುಖ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.
ತುಂತುರು ಮಳೆಯ ನಡುವೆಯೂ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸಲು ಹರಸಾಹಸ ಪಡುತ್ತಿದ್ದರು.ಮೂರು ದಿನಗಳಿಂದ ರಜೆ ಇದ್ದು, ಹೆಚ್ಚು ಜನರು ಊರಿಗೆ ಹೋಗಿದ್ದರಿಂದ ಸಂಚಾರದಟ್ಟಣೆ ಉಂಟಾಗಿ ಗೊರಗುಂಟೆೆಪಾಳ್ಯ, ಪೀಣ್ಯ, 8ನೇ ಮೈಲಿ, ಯಶವಂತಪುರ ಭಾಗಗಳಲ್ಲಿ ಹೆಚ್ಚಿನ ಸಂಚಾರದಟ್ಟಣೆ ಕಂಡುಬಂದಿತು.ಸಂಚಾರಿ ಪೊಲೀಸರು ಸಂಚಾರ ದಟ್ಟಣೆಯನ್ನು ನಿವಾರಿಸಲು ಹರಸಾಹಸ ಪಡಬೇಕಾಯಿತು.