ಬೆಂಗಳೂರು,ಜು.28– ಹಲಸೂರಿನ ಬಜಾಜ್ ಸ್ಟ್ರೀಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ತರಕಾರಿ ಅಂಗಡಿ ಹಾಗೂ ಹತ್ತು ಬೈಕ್‌ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಬಜಾಜ್‌ಸ್ಟ್ರೀಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ತರಕಾರಿ ಅಂಗಡಿ ಹಾಗೂ ಬೈಕ್ ಶೋ ರೂಂ ಆವರಿಸಿಕೊಂಡು ಹೊತ್ತಿ ಉರಿಯುತ್ತಿತ್ತು.ಅಕ್ಕಪಕ್ಕದ ಸಾರ್ವಜನಿಕರು ಗಮನಿಸಿ, ತಕ್ಷಣ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.
ಪೊಲೀಸರು, ಅಗ್ನಿಶಾಮಕ ವಾಹನದೊಂದಿಗೆ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದಾಗಿ ತರಕಾರಿ ಅಂಗಡಿ ಹಾಗೂ ಬೈಕ್ ಶೋ ರೂಂ ನಲ್ಲಿದ್ದ ಹತ್ತು ಬೈಕುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಂಕಿ ಹೇಗೆ ಕಾಣಿಸಿಕೊಂಡಿದೆ ಎಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ. ಈ ಬಗ್ಗೆ ಹಲಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಕಿ ಮೊದಲು ಯಾವ ಸ್ಥಳದಲ್ಲಿ ಹೇಗೆ ಕಾಣಿಸಿಕೊಂಡಿದೆ ಎಂಬುವುದರ ಬಗ್ಗೆ ಪರಿಶೀಲಿಸುತ್ತಿದ್ದಾರೆ.