ಬೆಂಗಳೂರು,ಅ.28- ಮಹಿಳೆಯರು ಬಾಯಿ ಚಪ್ಪರಿಸಿ ತಿನ್ನುವ ಗೋಲ್ಗಪ್ಪಾ ನಗರದಲ್ಲಿ ಬ್ಯಾನ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.ಸಾಮಾಜಿಕ ಜಾಲತಾಣಗಳಲ್ಲಿ ಗೋಲ್ಗಪ್ಪಾ ತಯಾರಿಕಾ ಘಟಕಗಳ ವಿಡಿಯೋ ವೈರಲ್ ಆದ ನಂತರ ಎಚ್ಚೆತ್ತುಕೊಂಡಿರುವ ಆಹಾರ ಇಲಾಖೆ ಅಧಿಕಾರಿಗಳು ಫುಡ್ ಟೆಸ್ಟಿಂಗ್ ಡ್ರೈವ್ ನಡೆಸಲು ತಯಾರಿ ನಡೆಸಿದ್ದಾರೆ.
ಗೋಲ್ ಗಪ್ಪಾ ದ ಪೂರಿ ತಯಾರಿಕಾ ಘಟಕಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಸ್ಯಾಂಪಲ್ ಪಡೆದು ತಪಾಸಣೆ ನಡೆಸಲು ಮುಂದಾಗಿದ್ದಾರೆ.ನಗರದ ಬೀದಿ ಬೀದಿಗಳಲ್ಲಿ ಮಾರಾಟ ಮಾಡಲಾಗುವ ಗೋಲ್ಗಪ್ಪಾ ಕ್ವಾಲಿಟಿ ಕುರಿತಂತೆ ಹಲವಾರು ದೂರು ಬಂದಿರುವುದು ಹಾಗೂ ಇತ್ತಿಚೆಗೆ ಕೆಲವು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುದ್ದಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ 200 ಕ್ಕೂ ಹೆಚ್ಚು ಗೋಲ್ಗುಪ್ಪಾ ಸ್ಯಾಂಪಲ್ಸ್ ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಗೋಲ್ಗುಪ್ಪಾ ಪೂರಿ ಹೇಗೆ ತಯಾರಿಸುತ್ತಾರೆ. ಅದಕ್ಕೆ ಏನೆಲ್ಲಾ ಪದಾರ್ಥ ಹಾಕುತ್ತಾರೆ. ಅದರಿಂದ ಮನುಷ್ಯರ ಮೇಲೆ ಏನೆಲ್ಲಾ ದುಷ್ಪರಿಣಾಮ ಬೀರುತ್ತೆ ಅನ್ನೊ ಬಗ್ಗೆ ಮಾಹಿತಿ ಪಡೆಯಲು ತೀರ್ಮಾನಿಸಲಾಗಿದೆ.
ಈಗಾಗಲೇ ಕಳೆದ ಹಲವಾರು ದಿನಗಳಿಂದ ಗೋಲ್ ಗಪ್ಪಾ ತಯಾರಿಕಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಂದೇರಡು ದಿನಗಳಲ್ಲಿ ವರದಿ ಬಂದ ನಂತರ ಗೋಲ್ಗಪ್ಪಾ ಮಾರಾಟಕ್ಕೆ ನಿರ್ಬಂಧ ಹಾಕುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.