ಬೆಂಗಳೂರು,ಅ.29- ದೀಪಾವಳಿ ಹಬ್ಬ ಆರಂಭಕ್ಕೂ ಮುನ್ನವೇ ಪಟಾಕಿ ಸಿಡಿತದಿಂದ ಯುವಕನೊಬ್ಬ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.
ಕಮ್ಮನಹಳ್ಳಿಯಲ್ಲಿ ಪಟಾಕಿ ಸಿಡಿತದಿಂದ ಕಣ್ಣಿನಲ್ಲಿ ರಕ್ತಸ್ರಾವವಾಗಿರುವುದರಿಂದ ಆತ ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಣ್ಣಿನ ಚಿಕಿತ್ಸೆಗೆ ಮಿಂಟೋ ರೆಡಿ: ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಗಾಯಕ್ಕೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸಜ್ಜಾಗಿದೆ. ದಿನದ 24 ಗಂಟೆಗಳ ಕಾಲ ಚಿಕಿತ್ಸೆ ನೀಡಲು ನಮ್ಮ ಆಸ್ಪತ್ರೆ ಸಿದ್ದವಿದೆ ಎಂದು ಅಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆಗೆ ಬರುವ ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್ ಮಾಡಲಾಗಿದೆ. ತುರ್ತು ಚಿಕಿತ್ಸೆಗೆ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಕಣ್ಣಿನ ಔಷಧಿಗಳು, ಐ ಡ್ರಾಪ್ಸ್ಗಳನ್ನು ಸಂಗ್ರಹಿಸಿಡಲಾಗಿದೆ. ವರ್ಷದಿಂದ ವರ್ಷಕ್ಕೆ ಪಟಾಕಿ ದುರಂತಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ದೀಪಾವಳಿ ಸಂದರ್ಭದಲ್ಲಿ ರಜೆ ತೆಗೆದುಕೊಳ್ಳದೆ ಕೆಲಸ ಮಾಡಲು ಮಿಂಟೋ ಆಸ್ಪತ್ರೆ ಸಿಬ್ಬಂದಿಗಳು ಸಿದ್ದರಾಗಿದ್ದಾರೆ.
ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಳ್ಳುವ ರೋಗಿಗಳಿಗೆ ಚಿಕಿತ್ಸೆ ನೀಡಲು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಪಟಾಕಿ ಗಾಯಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಬೆಡ್ ಮೀಸಲಿಡಲಾಗಿದೆ. ಏಳು ಪುರುಷ, ಮಹಿಳಾ ಬೆಡ್‌ಗಳು ಹಾಗೂ ಮಕ್ಕಳಿಗೆ ಪ್ರತ್ಯೇಕವಾದ ಬೆಡ್ ವ್ಯವಸ್ಥೆ ಮಾಡಲಾಗಿದೆ.
ತುರ್ತು ಸರ್ಜರಿ ಹಾಗೂ ಗಾಯಗೊಂಡ ರೋಗಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಅದೇ ಬ್ಲಾಕ್‌ನಲ್ಲಿ ಅಪರೇಷನ್ ಬ್ಲಾಕ್ ಅನ್ನು ಸ್ಥಾಪಿಸಲಾಗಿದೆ. ಮಿಂಟೋ ಆಸ್ಪತ್ರೆಗೆ ದಾಖಲಾಗಿರುವವರಿಗೆ ತುರ್ತು ಸಹಾಯವಾಣಿ ನಂಬರ್‌ಗಳನ್ನು ನೀಡಲಾಗಿದೆ. ಅಗತ್ಯವಿರುವವರು ದೂ. ಸಂಖೆಯ 9481740137 ಅಥವಾ 08026707176 ಸಂಪರ್ಕಿಸಲು ಕೋರಲಾಗಿದೆ.