ಬೆಂಗಳೂರು,ಅ.14- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರಂಭದಲ್ಲಿ ಒಂದಷ್ಟು ದಿನ ಸಹನೆಯಿಂದಿದ್ದ ಕೇಸರಿ ಬೆಂಬಲಿತ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಇತ್ತೀಚೆಗೆ ರೊಚ್ಚಿಗೆದ್ದಿದ್ದು, ರಾಜ್ಯಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರಮಣಕಾರಿಯಾಗಿ ಮುಗಿಬಿದ್ದಿದ್ದಾರೆ. ಈ ಹಿಂದಿಗಿಂತಲೂ ಹೆಚ್ಚು ತೀವ್ರವಾಗಿ ಮತ್ತು ನಿಂದನಾತ್ಮಕ ಭಾಷೆಗಳ ಮೂಲಕವೇ ಪ್ರತಿದಾಳಿ ನಡೆಸುತ್ತಿರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ.
ರಾಜ್ಯಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವುದಾಗಿ ಘೋಷಿಸಿತ್ತು. ಇದರ ಭಾಗವಾಗಿ ಸತ್ಯ ಶೋಧನಾ ತಂಡವನ್ನೂ ಕೂಡ ರಚಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವ ಮತ್ತು ಶಾಂತಿಗೆ ಭಂಗ ಉಂಟುಮಾಡುವಂತ ಮಾಹಿತಿಗಳನ್ನು ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಉದ್ದೇಶಪೂರಕವಾಗಿ ಬಿಜೆಪಿ ಕಾರ್ಯಕರ್ತರ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಕೋಮು ಪ್ರಚೋದಿತ ಪ್ರಕರಣಗಳಲ್ಲಿ ಕಾನೂನು ಕ್ರಮ ಎದುರಿಸುವ ಕಾರ್ಯಕರ್ತರ ರಕ್ಷಣೆಗೆ ವಕೀಲರ ತಂಡಗಳನ್ನು ರಚಿಸಿದೆ. ಇದರ ಜೊತೆಯಲ್ಲೇ ರಾಜ್ಯಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂಬ ದೊಡ್ಡ ಮಟ್ಟದ ಕೂಗು ಕೂಡ ಕೇಳಿಬಂದಿತ್ತು.
ಕ್ರಿಸ್ಟಿಯಾನೊ ರೊನಾಲ್ಡೊಗೆ ಕಾದಿದೆ 99 ಛಡಿ ಏಟಿನ ಶಿಕ್ಷೆ..!
ಹಂತಹಂತವಾಗಿ ಚೇತರಿಸಿಕೊಂಡಿರುವ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಇತ್ತೀಚೆಗೆ ತೀವ್ರ ಸ್ವರೂಪದ ಪ್ರತಿಕ್ರಿಯೆಗಳಿಗೆ ಮುಂದಾಗಿದ್ದಾರೆ. ರಾಜ್ಯಸರ್ಕಾರ ಪಂಚಖಾತ್ರಿ ಯೋಜನೆಗಳ ಜಾರಿಯ ಯಶಸ್ಸಿನಲ್ಲೇ ತೇಲುತ್ತಿದ್ದು, ಇದರ ಗುಂಗಿನಲ್ಲೇ ಲೋಕಸಭೆ ಚುನಾವಣೆಯನ್ನು ಗೆದ್ದು ಬೀಗುವ ಕನಸು ಕಾಣುತ್ತಿದೆ. ಆದರೆ ತೆರೆಮರೆಯಲ್ಲಿ ಪಂಚಖಾತ್ರಿ ಯೋಜನೆಗಳು ಒಂದು ವರ್ಗಕ್ಕೆ ಮಾತ್ರ ಲಾಭವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ತೆರಿಗೆಯ ದುಡ್ಡನ್ನು ತನ್ನ ಓಟ್‍ಬ್ಯಾಂಕ್ ರಾಜಕಾರಣಕ್ಕೆ ಬಳಸುತ್ತಿದೆ.
ಓಲೈಕೆಯ ರಾಜಕಾಣರಕ್ಕಾಗಿಯೇ ಸೀಮಿತವಾಗಿದೆ ಎಂಬ ವ್ಯಾಪಕ ಪ್ರಚಾರಗಳು ನಡೆದಿವೆ. ಗೃಹಜ್ಯೋತಿ, ಶಕ್ತಿಯಂತಹ ಯೋಜನೆಗಳ ಸೌಲಭ್ಯ ಪಡೆಯುವವರೂ ಕೂಡ ಅವುಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುವ ಬದಲಿಗೆ, ರಾಜ್ಯಸರ್ಕಾರ ಒಂದು ವರ್ಗಕ್ಕೆ ಮಾತ್ರ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಸಿಡಿಮಿಡಿಗೊಳ್ಳುವುದು ಕಂಡುಬರುತ್ತಿದೆ.
ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ನಡೆದಿರುವ ನಿರಂತರವಾದ ಪ್ರಚಾರ ಕಾರಣವಾಗಿದೆ. ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಮೊದಲಿನಿಂದಲೂ ಅತ್ಯಂತ ಬಲಿಷ್ಠವಾಗಿದೆ. ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಒಂದಿಷ್ಟು ಚುರುಕಾಗಿದ್ದುದನ್ನು ಹೊರತುಪಡಿಸಿದರೆ ಅಧಿಕಾರಕ್ಕೆ ಬರುತ್ತಿದ್ದಂತೆ ಮೈಮರೆತು ಮಲಗಿದೆ. ಜೊತೆಗೆ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬ ಉದ್ಧಟತನದ ಮಾತುಗಳ ಮೂಲಕ ಸರ್ವಾಧಿಕಾರಿ ಧೋರಣೆಗಳನ್ನು ಅನುಸರಿಸುತ್ತಿದೆ.
ಬಿಜೆಪಿ ವಿಧಾನಸಭೆ ಚುನಾವಣೆ ಸೋಲಿನಿಂದ ಎಚ್ಚೆತ್ತುಕೊಂಡು ಮತ್ತೊಮ್ಮೆ ಸಾಮಾಜಿಕ ಜಾಲತಾಣವನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದೆ. ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ನಾಯಕರ ವಿರುದ್ಧ ಕೇಳಿಬಂದ ಭ್ರಷ್ಟಾಚಾರಗಳಿಗೆ ಉತ್ತರ ಹೇಳಲಾಗದೆ ಮುಜುಗರಕ್ಕೊಳಗಾಗಿದ್ದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ರಾಜ್ಯಸರ್ಕಾರದ ಪಂಚಖಾತ್ರಿ ಯೋಜನೆಗಳು ಹಾಗೂ ಅಭಿವೃದ್ಧಿಯ ಕುರಿತಂತೆ ಮೈಕೊಡವಿ ನಿಂತಿದ್ದಾರೆ.
ಕಾಂಗ್ರೆಸ್‍ನ ಪ್ರತಿಯೊಂದು ನಡೆಯಲ್ಲೂ ಉಗ್ರ ಸ್ವರೂಪದಲ್ಲಿ ಟೀಕಿಸಲಾಗುತ್ತಿದೆ. ಜನಸಾಮಾನ್ಯರ ಮನಮುಟ್ಟುವಂತ ಪ್ರಚಾರ ಮಾಡಲಾಗುತ್ತಿದೆ. ಕೆಲವೊಮ್ಮೆ ಇದಕ್ಕೆ ಪ್ರತಿಯಾಗಿ ಸತ್ಯ ಹೇಳುವವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುವ ಮೂಲಕ 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಈ ರೀತಿಯ ಪ್ರವೃತ್ತಿಗಳು ಕಂಡುಬಂದಿದ್ದವು. ಈಗ ಮತ್ತೊಮ್ಮೆ 2024 ರ ಚುನಾವಣೆ ವೇಳೆಯಲ್ಲೂ ಇದು ಪುನರಾವರ್ತನೆಯಾಗಿದೆ.
ಅವಾಚ್ಯ ಶಬ್ದಗಳನ್ನು ಬಳಸಿದವರ ವಿರುದ್ಧ ದೂರು ನೀಡಿದರೆ ಅಥವಾ ಕ್ರಮ ಕೈಗೊಂಡರೆ ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆ ಹಾಕಲಾಗುತ್ತಿದೆ. ಈ ಮೊದಲು ಹಿಂದೂ ಭಾವನೆಗಳನ್ನು ಆಧರಿಸಿ ಹೆಚ್ಚು ಆಕ್ರಮಣಕಾರಿಯಾಗಿದ್ದ ಬಿಜೆಪಿ ಬೆಂಬಲಿತ ಕಾರ್ಯಕರ್ತರು ಪ್ರಸ್ತುತ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ.
ಸೈನಿಕರ ಬಲಿದಾನಕ್ಕಿಂತ ಹೆಚ್ಚಾಯ್ತಾ ಕ್ರಿಕೆಟ್ : ಬಿಸಿಸಿಐ ವಿರುದ್ಧ ರೊಚ್ಚಿಗೆದ್ದ ದೇಶಪ್ರೇಮಿಗಳು
ಧಾರ್ಮಿಕ ಭಾವನೆಗಳು ಒಂದು ಕಡೆಯಾದರೆ, ಮತ್ತೊಂದೆಡೆ ಸರ್ಕಾರದ ಪ್ರತಿಯೊಂದು ನಡೆಯನ್ನು ವೈಫಲ್ಯವೆಂದೇ ಬಿಂಬಿಸಲಾಗುತ್ತಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಪಕ್ಷ ಬಿಜೆಪಿಯ ಆಕ್ರಮಣದ ಮುಂದೆ ಸಪ್ಪೆಯಾಗಿದ್ದು, ಮೌನಕ್ಕೆ ಶರಣಾಗುವ ಅನಿವಾರ್ಯತೆಗೆ ಸಿಲುಕಿದೆ.