ಬೆಂಗಳೂರು, ನ.10- ಜೈಲುಗಳಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ಪರಿಶೀಲನೆ ನಡೆಸಿ, ವರದಿ ನೀಡಲು ಎಡಿಜಿಪಿ ಹಂತದ ಅಧಿಕಾರಿಯ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ. ಪ್ರಸ್ತುತ ಘಟನೆಗೆ ಸಂಬಂಧಪಟ್ಟಂತೆ ಒಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ಮತ್ತಿಬ್ಬರನ್ನು ಅಮಾನತು ಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಕಚೇರಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉನ್ನತಾಧಿಕಾರ ಸಮಿತಿಗೆ ಕಾನೂನು ಮತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿದೇರ್ಶಶಕ ಆರ್. ಹಿತೇಂದ್ರ ಅವರನ್ನು ಮುಖ್ಯಸ್ಥನಾಗಿ ನೇಮಿಸಲಾಗಿದೆ.
ಐಜಿ ಸಂದೀಪ್ ಪಾಟೀಲ್, ಎಸ್‌ಪಿಗಳಾದ ಅಮರ್‌ನಾಥ್ ರೆಡ್ಡಿ, ರಿಶಾಂತ್ ಅವರನ್ನೊಳಗೊಂಡ ನಾಲ್ವರ ಸಮಿತಿಯನ್ನು ರಚಿಸಿದ್ದು, ಒಂದು ತಿಂಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿಗಳು ಸಮಿತಿಯ ಸಹ ಸದಸ್ಯರಾಗಿರುತ್ತಾರೆ ಎಂದರು. ಈ ಸಮಿತಿ ರಾಜ್ಯದಲ್ಲಿರುವ ಎಲ್ಲಾ ಜೈಲುಗಳಲ್ಲಿನ ಲೋಪಗಳನ್ನು ಪತ್ತೆ ಹಚ್ಚಿ ಮತ್ತು ಪ್ರಸ್ತುತ ಸಂದರ್ಭದ ವಿದ್ಯಮಾನಗಳನ್ನು ತನಿಖೆ ನಡೆಸಿ ವರದಿ ನೀಡಲಿದೆೆ ಎಂದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯ ಜೈಲು ಅಧೀಕ್ಷಕ ಕೆ. ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಕ್ಕೆ ಐಪಿಎಸ್ ಅಧಿಕಾರಿಯನ್ನು ನಿಯೋಜಿಲಾಗುತ್ತದೆ. ಇನ್ನು ಮುಂದೆ ಪರಪ್ಪನ ಅಗ್ರಹಾರ ಜೈಲು ನಿರ್ವಾಹಣೆಯನ್ನು ಐಪಿಎಸ್ ಅಧಿಕಾರಿಯೇ ನೋಡಿಕೊಳ್ಳಲಿದ್ದಾರೆ. ಜೈಲು ಅಧೀಕ್ಷಕ ಮ್ಯಾಗೇರಿ ಹಾಗೂ ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.
