ಬೆಂಗಳೂರು,ಅ.23-ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಅಂಗಡಿ ಮುಂಭಾಗ ಮಲಗಿದ್ದ ಅಪರಿಚಿತ ವ್ಯಕ್ತಿಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೆಕ್ಯಾನಿಕ್‌ನನ್ನು ಸಿಸಿ ಕ್ಯಾಮೆರಾ ಸಹಾಯದಿಂದ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಸಿನಗರದ ನಿವಾಸಿ ಸಾಹಿಲ್ ಪಾಷಾ (22) ಬಂಧಿತ ಮೆಕ್ಯಾನಿಕ್.ಈತ ರಾತ್ರಿ ವೇಳೆ ಸುತ್ತಾಡುತ್ತಾ ಎಲ್ಲೆಂದರಲ್ಲೇ ಮಲಗುತ್ತಿದ್ದ ಎಂಬುವುದು ಗೊತ್ತಾಗಿದೆ.ಯಲಚೇನಹಳ್ಳಿ ಮೆಟ್ರೋ ನಿಲ್ದಾಣ ಸಮೀಪದ ಶ್ರೀ ಸಿದ್ದೇಶ್ವರ ಗ್ಲಾಸ್ ಅಂಡ್ ಪೈವುಡ್ಸ್ ಅಂಗಡಿ ಮುಂಭಾಗ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ ನಿನ್ನೆ ಬೆಳಗಿನ ಜಾವ 4.20 ರ ಸುಮಾರಿನಲ್ಲಿ ಮಲಗಿದ್ದನ್ನು ಕಂಡ ಆರೋಪಿ ಸಾಹಿಲ್ ಪಾಷಾ ಅವರ ಬಳಿಹೋಗಿ ಅವರನ್ನು ಎಬ್ಬಿಸಿ ಹಣ ಕೇಳಿದ್ದಾನೆ.
ನನ್ನ ಬಳಿ ಇಲ್ಲ ಎಂದು ಬೈದು ಮತ್ತೆ ಆ ವ್ಯಕ್ತಿ ಮಲಗಿದ್ದಾರೆ. ಆರೋಪಿ ಸ್ವಲ್ಪ ದೂರ ನಡೆದು ಹೋಗುವಂತೆ ನಟಿಸಿ ಕೆಲ ನಿಮಿಷದ ಬಳಿಕ ಮತ್ತೆ ಈ ಸ್ಥಳಕ್ಕೆ ಬಂದು ಹಣ ಕೊಡದ ಕೋಪಕ್ಕೆ ಕೈಗೆ ಸಿಕ್ಕಿದ ಕಲ್ಲನ್ನು ತೆಗೆದುಕೊಂಡು ಮಲಗಿದ್ದ ಅಪರಿಚಿತ ವ್ಯಕ್ತಿಯ ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನು.ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದವರು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಅದರಲ್ಲಿ ಸೆರೆಯಾಗಿದ್ದ ದೃಶ್ಯ ಆಧರಿಸಿ ಕೇವಲ ನಾಲ್ಕು ಗಂಟೆಯ ಅವಧಿಯೊಳಗೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ. ಕೊಲೆಯಾಗಿರುವ ಸುಮಾರು 45 ರಿಂದ 50 ವರ್ಷದಂತೆ ಕಾಣುವ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.