ಬೆಂಗಳೂರು,ಆ.10- ನಗರದ ಸಂಚಾರದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮೆಟ್ರೋ ಹಂತ-3ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಂಕು ಸ್ಥಾಪನೆಯನ್ನು ನೆರವೇರಿಸಿದರು.
ಎಲೆಕ್ಟ್ರಾನಿಕ್‌ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರ ಮದಲ್ಲಿ ಮೆಟ್ರೋ ಹಂತ-3ಕ್ಕೆ ಮೋದಿ ಯವರು ಶಂಕುಸ್ಥಾಪನೆಯನ್ನು ನೆರವೇ ರಿಸಿದ್ದು ಇದು 2028ಕ್ಕೆ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ.
ಸುಮಾರು 44.65 ಕಿ.ಮೀ. ದೂರದ ಅಂದಾಜು 15,615 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 2 ಕಾರಿಡಾರ್‌ನಲ್ಲಿ ಕಾಮಗಾರಿ ನಡೆಯಲಿದೆ. ಮೊದಲ ಕಾರಿಡಾರ್ ಜೆ.ಪಿ.ನಗರ 4ನೇ ಹಂತ ಕೆಂಪಾಪುರದಿಂದ 21 ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಿದರೆ, 2ನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆಗೆ 9 ನಿಲ್ದಾಣಗಳನ್ನು ಒಳಗೊಳ್ಳಲಿದೆ.
ಕೆಲ ತಿಂಗಳ ಹಿಂದೆ ಈ 2 ಕಾರಿಡಾರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿತ್ತು. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಬಿಎಂಆರ್‌ಸಿಎಲ್ ಪ್ರಾರಂಭಿಸಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ಸಂಭವವಿದೆ.
ಒಂದನೇ ಕಾರಿಡಾರ್ ಮೂರು ಪ್ಯಾಕೇಜ್‌ಗಳಲ್ಲಿ, 2ನೇ ಕಾರಿಡಾರ್ 4 ಪ್ಯಾಕೇಜ್‌ಗಳಲ್ಲಿ ನಡೆಯಲಿದೆ. ಮೊದಲ ಪ್ಯಾಕೇಜ್ ಜೆ.ಪಿ.ನಗರ 4ನೇ ಹಂತದಿಂದ ಮೈಸೂರು ರಸ್ತೆಯ ಸರ್ವೇಯನ್ನು ಮುಗಿಸಿ ಅಂತಿಮ ಸೂಚನೆಯನ್ನು ಹೊರಡಿಸಲಾಗಿದೆ.
ಕಂಠೀರವ ಸ್ಟೇಡಿಯಂನಿಂದ ಕೆಂಪಾಪುರದವರೆಗಿನ ಮೂರನೇ ಪ್ಯಾಕೇಜ್‌ನಲ್ಲಿ 100 ಆಸ್ತಿಗಳನ್ನು ಗುರುತಿಸಲಾಗಿದೆ. ಮೈಸೂರು ರಸ್ತೆ-ಕಂಠೀರವ ಸ್ಟೇಡಿಯಂವರೆಗೆ 2ನೇ ಪ್ಯಾಕೇಜ್ ಸರ್ವೇ ನಡೆಯಲಿದೆ.
ಮೂರು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸುವಂತೆ ಬಿಎಂಆರ್‌ಸಿಎಲ್ ಸೂಚಿಸಿದೆ. ಕಾರಿಡಾರ್-2ಕ್ಕೆ ಸಂಬಂಧಿಸಿದಂತೆ ಸರ್ವೇ ನಡೆಯುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆ 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಕೆಂಪಾಪುರ-ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ, ಹೆಬ್ಬಾಳ ರೈಲು ನಿಲ್ದಾಣ, ನಾಗಶೆಟ್ಟಿಹಳ್ಳಿ, ಬಿಇಎಲ್ ಸರ್ಕಲ್, ಮುತ್ಯಾಲ ನಗರ, ಪೀಣ್ಯ, ಕಂಠೀರವ ನಗರ, ಸ್ವತಂತ್ರ್ಯ ಯೋಧರ ಕಾಲೋನಿ, ಚೌಡೇಶ್ವರಿ ನಗರ, ನಾಗರಭಾವಿ ಬಿಡಿಎ, ಪಾಪರೆಡ್ಡಿಪಾಳ್ಯ, ವಿನಾಯಕ ಲೇಔಟ್, ನಾಗರಭಾವಿ ವೃತ್ತ, ಮೈಸೂರು ರಸ್ತೆ, ದ್ವಾರಕನಗರ ತಲುಪಲಿದೆ.
2ನೇ ಕಾರಿಡಾರ್, ಹೊಸಹಳ್ಳಿ, ಕಡಬಗೆರೆ ನಡುವೆ ಪ್ರಾರಂಭವಾಗಲಿದೆ. ಹೊಸಹಳ್ಳಿ, ಕಾಮಾಕ್ಷಿಪಾಳ್ಯ, ಕೆಎಚ್‌ಬಿ ಕಾಲೋನಿ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಏರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್‌ಲೇಔಟ್, ಕಡಬಗೆರೆಗೆ ತಲುಪಲಿದೆ.