ಬೆಂಗಳೂರು,ಸೆ.26-ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ 22 ವಾಹನಗಳಿಗೆ ಹಾನಿ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಮುದ್ದಯ್ಯನ ಪಾಳ್ಯದಲ್ಲಿ ಮೊನ್ನೆ ರಾತ್ರಿ ಪುಂಡರು ದೊಣ್ಣೆ ಹಿಡಿದು ತಿರುಗಾಡುತ್ತಾ ರಸ್ತೆ ಬದಿ ನಿಲ್ಲಿಸಿದ್ದ 6 ಕಾರುಗಳು ಹಾಗೂ ಒಂದು ಆಟೋರಿಕ್ಷಾದ ಗಾಜನ್ನು ಒಡೆದು ಹಾನಿಗೊಳಿಸಿದ್ದಾರೆ.
ನಂತರ ಬ್ಯಾಡರ ಹಳ್ಳಿ ಕಡೆಗೆ ಹೋದ ಈ ಪುಂಡರು ವಾಲೀಕಿ ನಗರದ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳು ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಿದ್ದ ವಾಹನಗಳ ಗಾಜುಗಳನ್ನು ಒಡೆದಿದ್ದಾರೆ. ದುಷ್ಕರ್ಮಿಗಳ ಪುಂಡಾಟದಿಂದಾಗಿ 15 ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ಹಾನಿಯಾಗಿವೆ. ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಷ್ಟಕ್ಕೆ ಸುಮನಾಗದ ದುಷ್ಕರ್ಮಿಗಳು ಮಾಗಡಿ ರಸ್ತೆಗೆ ತೆರಳಿದ್ದು, ರಸ್ತೆ ಬದಿ ಹಾಲಿನ ಕ್ಯಾಂಟರ್ ಪಾರ್ಕಿಂಗ್ ಮಾಡಿ ವಾಹನದೊಳಗೆ ಮಲಗಿದ್ದ ಚಾಲಕನಿಗೆ ದೊಣ್ಣೆ ತೋರಿಸಿ ಬೆದರಿಸಿ ಹಲ್ಲೆ ನಡೆಸಿ ಮೊಬೈಲ್ ಹಾಗೂ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ್ದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ರೀತಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲೂ ಪುಂಡಾಟ ಮೆರೆದು ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಶೋಧ ಕೈಗೊಂಡಿದ್ದಾರೆ.