Saturday, January 24, 2026
Homeಬೆಂಗಳೂರುಮೆಟ್ರೋಗಾಗಿ ಬೆಂಗಳೂರಿನ ಮತ್ತೊಂದು ಮೇಲ್ಸೇತುವೆ ನೆಲಸಮ

ಮೆಟ್ರೋಗಾಗಿ ಬೆಂಗಳೂರಿನ ಮತ್ತೊಂದು ಮೇಲ್ಸೇತುವೆ ನೆಲಸಮ

Another flyover in Bengaluru demolished for metro

ಬೆಂಗಳೂರು, ಜ. 24- ನಗರದಲ್ಲಿ ಮತ್ತೊಂದು ಮೇಲ್ಸೇತುವೆಯನ್ನು ನೆಲಸಮಗೊಳಿಸಲಾಗುತ್ತಿದೆ.ಜೆಪಿ ನಗರದ ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಡಾಲರ್ಸ್‌ ಕಾಲೋನಿ ಜಂಕ್ಷನ್‌ ಮೇಲ್ಸೇತುವೆಯನ್ನು ನೆಲಸಮ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಟೆಂಡರ್‌ ಕರೆದಿದೆ.

ಜಯದೇವ ಫ್ಲೈ ಓವರ್‌ ತೆರವು ಬಳಿಕ ಈಗ ಮತ್ತೊಂದು ಮೇಲ್ಸುತುವೆ ತೆರವಿಗೆ ಮುಂದಾಗಿರುವುದು ವಾಹನ ಸವಾರರು ಹಾಗೂ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಜೆಪಿ ನಗರದ ನಾಲ್ಕನೇ ಹಂತದಿಂದ ಕೆಂಪಾಪುರವರೆಗಿನ ಆರೆಂಜ್‌ ಲೈನ್‌ ಮೆಟ್ರೋ ಕಾಮಗಾರಿಯ ಹಿನ್ನೆಲೆಯಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

2018ರಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡಿದ್ದ ಈ ಮೇಲ್ಸೇತುವೆ ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ ಹಾಗೂ ಜಯನಗರ ಸುತ್ತಮುತ್ತಲಿನ ಪ್ರದೇಶಗಳ ಸಂಚಾರಕ್ಕೆ ಸಹಕಾರಿಯಾಗಿತ್ತು.

ಸುಮಾರು ಒಂದು ಕಿಲೋಮೀಟರ್‌ ಉದ್ದದ ಈ ಮೇಲ್ಸುತುವೆ ತೆರವುಗೊಳ್ಳಲಿರುವುದರಿಂದ ದಿನನಿತ್ಯದ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.ಆರೆಂಜ್‌ ಲೈನ್‌ ಮೆಟ್ರೋ ಯೋಜನೆಯಡಿ ಡಬಲ್‌ ಡೆಕ್ಕರ್‌ ಜೊತೆಗೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಇತ್ತೀಚೆಗೆ ಸಿವಿಲ್‌ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಿದೆ.

ಮೂರನೇ ಹಂತದ ಮೆಟ್ರೋ ಯೋಜನೆಯಾದ ಆರೆಂಜ್‌ ಲೈನ್‌ ಒಟ್ಟು 44.65 ಕಿಮೀ ವಿಸ್ತೀರ್ಣ ಹೊಂದಿದ್ದು, ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಮೊದಲ ಕಾರಿಡಾರ್‌ ಹಾಗೂ ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆವರೆಗೆ ಎರಡನೇ ಕಾರಿಡಾರ್‌ ಒಳಗೊಂಡಿದೆ.

ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಮೆಟ್ರೋ ಕಾಮಗಾರಿ ಸ್ವಾಗತಾರ್ಹವಾದರೂ, ಡಬಲ್‌ ಡೆಕ್ಕರ್‌ ಫ್ಲೈಓವರ್‌ ನಿರ್ಮಾಣ ಪೂರ್ಣಗೊಳ್ಳುವವರೆಗೆ ಸಂಚಾರ ಸಮಸ್ಯೆ ಇದ್ದೇ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News