ಬೆಂಗಳೂರು,ಡಿ.9- ದುಬಾರಿ ಬೆಲೆಯ ಬೈಕ್‌ಗಳನ್ನೇ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕುಂಬಳಗೂಡು ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ಬೆಲೆಯ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಚಂದ್ರಾಲೇಔಟ್‌ನ ನಿವಾಸಿ ಅಯೂಬ್ ಖಾನ್ (26) ಬಂಧಿತ ದ್ವಿಚಕ್ರ ವಾಹನ ಕಳ್ಳ.
ಈಡಿಗರ ಬೀದಿಯ ನಿವಾಸಿಯೊಬ್ಬರು ತಮ ಮನೆಯ ಮುಂದೆ ಕೆಟಿಎಂ ದ್ವಿಚಕ್ರ ವಾಹನ ನಿಲ್ಲಿಸಿ ಬೀಗ ಹಾಕಿದ್ದರು. ಮಾರನೇ ದಿನ ನೋಡಿದಾಗ ದ್ವಿಚಕ್ರ ವಾಹನ ಇರಲಿಲ್ಲ. ಈ ಬಗ್ಗೆ ಅವರು ಕುಂಬಳಗೂಡು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಬ್ಯಾಟರಾಯನಪುರದ ಟೆಂಟ್‌ಹೌಸ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ಹೇಳಿದ್ದಾನೆ.
ಅಲ್ಲದೇ ನಗರದ ವಿವಿಧ ಕಡೆಗಳಲ್ಲಿಯೂ ಸಹ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಕಂಬಿಪುರದಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ಆರೋಪಿ ತಿಳಿಸಿದ್ದು, ಆ ವಾಹನಗಳನ್ನು ಇನ್‌ಸ್ಪೆಕ್ಟರ್ ಮಂಜುನಾಥ.ಜಿ.ಹೂಗರ್ ಹಾಗೂ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಆರೋಪಿಯ ಬಂಧನದಿಂದ ಕುಂಬಳಗೂಡು, ಹೆಚ್‌ಎಎಲ್, ಬ್ಯಾಟರಾಯನಪುರ ಹಾಗೂ ವಿಜಯನಗರ ಪೊಲೀಸ್ ಠಾಣೆಯ ತಲಾ 1 ಪ್ರಕರಣ ಸೇರಿ ಒಟ್ಟು 4 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
