ಬೆಂಗಳೂರು,ಜ.7- ದ್ವೇಷದಿಂದ ಆರು ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿರುವ ದಾರುಣ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಇಜಾಮುಲ್ ಶೇಕ್ ಎಂಬುವವರ ಪುತ್ರಿ ಶಹಜಾನ್ ಕತೂನ್ (6) ಕೊಲೆಯಾದ ಬಾಲಕಿ.
ಬಾಲಕಿಯ ತಂದೆ ಗುಜುರಿ ಕೆಲಸ ಮಾಡಿಕೊಂಡಿದ್ದು, ನೆಲ್ಲೂರಹಳ್ಳಿಯಲ್ಲಿ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿದ್ದಾರೆ. ಯಾವುದೋ ವಿಚಾರಕ್ಕೆ ನೆರೆಮನೆಯವರಿಗೂ ಹಾಗೂ ಇವರ ಮಧ್ಯೆ ಜಗಳವಾಗಿದೆ.ಈ ನಡುವೆ ನಿನ್ನೆ ಮಧ್ಯಾಹ್ನದಿಂದ ಇವರ ಮಗಳು ಶಹಜಾನ್ ನಾಪತ್ತೆಯಾಗಿದ್ದಾಳೆ. ಪೋಷಕರು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದಿದ್ದಾಗ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾತ್ರಿಯಿಡೀ ಹುಡುಕಾಟ ನಡೆಸುತ್ತಿದ್ದಾಗ ಮಧ್ಯರಾತ್ರಿ ಟೆಂಪಲ್ ರಸ್ತೆಯ ಚರಂಡಿಯೊಂದರಲ್ಲಿ ಅನುಮಾನಾಸ್ಪದವಾಗಿ ಚೀಲ ಕಂಡು ಬಂದಿದೆ. ಪೊಲೀಸರು ಸಮೀಪ ಹೋಗಿ ಚೀಲ ತೆಗೆದು ನೋಡಿದಾಗ ಅದರಲ್ಲಿ ಬಾಲಕಿಯ ಶವ ಕಂಡು ಬಂದಿದೆ.
ನಂತರ ದೂರು ನೀಡಿದ್ದ ವ್ಯಕ್ತಿಗೆ ಮೃತದೇಹ ಗುರುತಿಸಲು ವಿಷಯ ತಿಳಿಸಿದ್ದು, ಆ ವ್ಯಕ್ತಿ ಹೋಗಿ ನೋಡಿದಾಗ ತನ್ನ ಮಗಳದ್ದೇ ಎಂದು ಗೋಳಾಡಿದ್ದಾರೆ.ದುಷ್ಕರ್ಮಿಗಳು ಬಾಲಕಿಯನ್ನು ಅಪಹರಿಸಿ ಪ್ಲಾಸಿಕ್ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಗೋಣಿ ಚೀಲದಲ್ಲಿ ಶವವನ್ನು ಹಾಕಿ ಮನೆ ಸಮೀಪದ ನೆಲ್ಲೂರ ಹಳ್ಳಿಯ ಟೆಂಪಲ್ ರಸ್ತೆಯ ಚರಂಡಿಯಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ.
ಮೃತದೇಹವನ್ನು ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ತಂಡ ರಚನೆ:
ಕೊಲೆ ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಿದ್ದು, ಈಗಾಗಲೇ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲಿ ಬಂಧಿಸುವುದಾಗಿ ಡಿಸಿಪಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
