ಬೆಂಗಳೂರು,ಡಿ.24- ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಎರಡು ಐಷಾರಾಮಿ ಕಾರುಗಳಿಗೆ ಬೆಂಕಿ ತಗುಲಿ ಹಾನಿಗೀಡಾಗಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.ಜೆಪಿ ನಗರ 8 ನೇ ಹಂತದ ವಡ್ಡರಪಾಳ್ಯದ ನಿವಾಸಿ, ಖಾಸಗಿ ಶಾಲೆಯೊಂದರ ಸಂಸ್ಥಾಪಕರಾದ ಮಂಜುನಾಥ್ ಅವರು ತಮ ಮನೆಯ ಆವರಣದಲ್ಲಿ ಬಿಎಂಡಬ್ಲ್ಯೂ ಕಾರು ಹಾಗೂ ಮತ್ತೊಂದು ಕಾರನ್ನು ನಿಲ್ಲಿಸಿದ್ದಾರೆ.
ಇಂದು ಬೆಳಗಿನ ಜಾವ 2.30 ರ ಸುಮಾರಿನಲ್ಲಿ ಆಕಸಿಕವಾಗಿ ಬೆಂಕಿಯ ಕಿಡಿ ಕಾರಿಗೆ ತಗುಲಿದ್ದರಿಂದ ಮತ್ತೊಂದು ಕಾರಿಗೂ ತಾಗಿ ಬೆಂಕಿ ಹೊತ್ತಿಕೊಂಡಿದೆ. ಅಲ್ಲದೆ ಹೊಸ ಮನೆಗಾಗಿ ಸಂಗ್ರಹಿಸಿಟ್ಟಿದ್ದ ಟೀಕ್ ವುಡ್ ಸಹ ಬೆಂಕಿಯಿಂದ ಸುಟ್ಟುಹೋಗಿದೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ವಾಹನದೊಂದಿಗೆ ಬಂದು ಬೆಂಕಿಯನ್ನು ನಂದಿಸಿ ಸಂಭವಿಸಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಕಾರಿನ ಬ್ಯಾಟರಿ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೋಣನಕುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
