ಬೆಂಗಳೂರು,ಡಿ.16- ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ನಡುರಸ್ತೆಯಲ್ಲೇ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ರಸ್ತೆಯಲ್ಲೇ ನಿತ್ರಾಣಗೊಂಡು ಬಿದ್ದಿದ್ದ ಪತಿಯ ಜೀವ ಉಳಿಸಲು ಪತ್ನಿ ಕೈಮುಗಿದು ಅಂಗಲಾಚಿದರೂ ಸಹ ಯಾರೂ ಕೂಡ ನೆರವಿಗೆ ಬಾರದಿರುವುದು ದುರ್ದೈವ.
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬನಶಂಕರಿ ಮೂರನೇ ಹಂತ ಇಟ್ಟುಮಡುವಿನ ಬಾಲಾಜಿ ನಗರದ ನಿವಾಸಿ ವೆಂಕಟರಾಮಣನ್ (34) ಮೃತ ದುರ್ದೈವಿ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ವೆಂಕಟರಾಮಣನ್‌ಅವರಿಗೆ ಮನೆಯಲ್ಲಿಯೇ ಎದೆನೋವು ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥಗೊಂಡು ವಾಂತಿ ಮಾಡಿಕೊಂಡಿದ್ದಾರೆ. ಬಳಿಕ ಬೈಕ್‌ನಲ್ಲಿಯೇ ದಂಪತಿ ಕತ್ರಿಗುಪ್ಪೆ ಜನತಾ ಬಜಾರ್ ಸಮೀಪದ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ.
ಅಲ್ಲಿ ವೈದ್ಯರು ಇಲ್ಲದ ಕಾರಣ ಮತ್ತೊಂದು ಸಮೀಪದ ಖಾಸಗಿ ಆಸ್ಪತ್ರೆಗೆ ತೆರಳಿದರು. ಖಾಸಗಿ ಆಸ್ಪತ್ರೆಯಲ್ಲಿ ಇಸಿಜಿ ಮಾಡಿದಾಗ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿರೋದು ಗೊತ್ತಾಗಿದೆ. ಈ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡದೆ ಜಯದೇವ ಆಸ್ಪತ್ರೆಗೆ ಹೋಗುವಂತೆ ಸೂಚನೆ ನೀಡಿದ್ದಾರೆ
ಆ ಸಂದರ್ಭದಲ್ಲಿ ಪತ್ನಿ ರೂಪ ಅವರಿಗೆ ದಿಕ್ಕು ತೋಚದಂತಾಗಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳ ಸವಾರರಿಗೆ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ, ಯಾವೊಂದು ವಾಹನದ ಸವಾರರೂ ಕೂಡ ಇವರ ಸಹಾಯಕ್ಕೆ ಬಂದಿಲ್ಲ.
ರಸ್ತೆಯಲ್ಲಿ ವೆಂಕಟರಮಣನ್ ಅವರು ಬಿದ್ದು ಸಾವು-ಬದುಕಿನ ನಡುವೆ ಒದ್ದಾಡಿದ್ದಾರೆ. ಆ ವೇಳೆ ಯಾರೊಬ್ಬರೂ ಸಹಾಯಕ್ಕೆ ಬರದೇ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ನಡುವೆ ಸ್ಥಳಕ್ಕೆ ದೌಡಾಯಿಸಿದ ವೆಂಕಟರಮಣನ್ ಅವರ ಅಕ್ಕ ಸಹ ತಮನ ಪ್ರಾಣ ಉಳಿಸಲು ಸತತ ಪ್ರಯತ್ನ ನಡೆಸಿ ನಡುರಸ್ತೆಯಲ್ಲಿಯೇ ಸಿಪಿಆರ್ ಮಾಡಿದ್ದಾರೆ. ಈ ಮಧ್ಯೆ ಸಾಕಷ್ಟು ಸಮಯ ಕಳೆದುಹೋಗಿತ್ತು.
ಕೊನೆಗೆ ಕ್ಯಾಬ್ ಚಾಲಕರೊಬ್ಬರು ಅವರ ನೆರವಿಗೆ ಬಂದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ವೈದ್ಯರು ಪರೀಕ್ಷಿಸಿ ದುರಾದೃಷ್ಟವಶಾತ್ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.ಈ ಘಟನೆಯಿಂದ ಜನರು ಮಾನವೀಯತೆಯನ್ನೇ ಕಳೆದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
