ಬೆಂಗಳೂರು,ಜ.11- ಚಾಲಕನ ನಿಯಂತ್ರಣ ತಪ್ಪಿದ ಕ್ಯಾಬ್ ರಸ್ತೆಬದಿಯ ಬ್ಯಾರಿಕೇಡ್‌ಗೆ ಅಪ್ಪಳಿಸಿ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನೈಸ್ ರಸ್ತೆಯ ವರಹಾಸಂದ್ರ ಜಂಕ್ಷನ್ ಬಳಿ ಇಂದು ಮುಂಜಾನೆ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ಮೂಲದ ಕ್ಯಾಬ್ ಚಾಲಕ ದೇವರಾಜ್(32) ಹಾಗೂ ಅಶೋಕ(35) ಮೃತಪಟ್ಟ ದುರ್ದೈವಿಗಳು.
ಇಂದು ಮುಂಜಾನೆ 4.20ರ ಸಮಯದಲ್ಲಿ ನೈಸ್‌ರಸ್ತೆಯ ಹೊಸಕೆರೆಹಳ್ಳಿ ಟೋಲ್ ಕಡೆಯಿಂದ ವೇಗವಾಗಿ ಬಂದ ಕಾರು ಸೋಂಪುರ ಕ್ಲೇವರ್‌ಲೀಫ್ ಸಮೀಪ ರಸ್ತೆಯ ಉಬ್ಬುಗಳನ್ನು ಎಗರಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಮಣ್ಣಿನ ಗುಡ್ಡೆಯ ಮೇಲೆ ಉರುಳಿಬಿದ್ದಿದೆ.
ಕಾರಿನಲ್ಲಿ ಐವರು ಸ್ನೇಹಿತರಿದ್ದು, ಎಲ್ಲರಿಗೂ ಸಹ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸುವಾಗ ದೇವರಾಜ್ ಹಾಗೂ ಅಶೋಕ್ ಮೃತಪಟ್ಟಿದ್ದು, ಶ್ರೀನಿವಾಸ್, ಮದನ್, ಮಹಂತೇಶ್ ಎಂಬುವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅತಿವೇಗ ಹಾಗೂ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ಐವರು ಸ್ನೇಹಿತರು ನೆಲಮಂಗಲಕ್ಕೆ ಹೋಗುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ತಲ್ಲಘಟ್ಟಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
