ಬೆಂಗಳೂರು,ಡಿ.31- ಹೊಸವರ್ಷಾಚರಣೆಯನ್ನು ಎಲ್ಲರೂ ಜವಾಬ್ದಾರಿಯುತವಾಗಿ ಆಚರಿಸಿ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸಂಭ್ರಮದ ನೆಪದಲ್ಲಿ ಇನ್ನೊಬ್ಬರಿಗೆ ತೊಂದರೆ ಕೊಡಬೇಡಿ ಒಂದು ವೇಳೆ ದುವರ್ತನೆ ತೋರಿದರೆ ಅಂತಹವರನ್ನು ಮುಲಾಜಿಲ್ಲದೇ ಬಂಧಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಸಿಬ್ಬಂದಿಗಳು ಈಗಾಗಲೇ ಕರ್ತವ್ಯದಲ್ಲಿದ್ದಾರೆ. ಅಧಿಕಾರಿಗಳು ಗಸ್ತಿನಲ್ಲಿದ್ದಾರೆಂದು ಅವರು ಹೇಳಿದರು.
ವರ್ಷಾಚರಣೆ ನಡೆಯುವ ಎಂಜಿ ರಸ್ತೆ,ಬ್ರಿಗೇಡ್ ರಸ್ತೆ, ಚರ್ಚ್ಸ್ಟ್ರೀಟ್ಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಈಗಾಗಲೇ ಬಂದೋಬಸ್ತ್ ಪರಿಶೀಲಿಸಿದ್ದೇವೆ ಎಂದು ಅವರು ವಿವರಿಸಿದರು.
ಶಾಂತಿ ಕದಡುವ ಸಮಾಜಘಾತುಕ ಶಕ್ತಿಗಳು ಕಂಡು ಬಂದಲ್ಲಿ ತಕ್ಷಣ ಬಂಧಿಸಿ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು.
ಮದ್ಯ ಸೇವಿಸಿ ವಾಹನ ಚಾಲನೆ ಮಾಡದಂತೆ ಈಗಾಗಲೇ ನಾವು ಹಲವು ಬಾರಿ ಮನವಿ ಮಾಡಿದ್ದೇವೆ. ಈಗಲೂ ಸಹ ಮನವಿ ಮಾಡುತ್ತಿದ್ದೇವೆ. ದಯವಿಟ್ಟು ಅಂತಹವರು ಸಾರ್ವಜನಿಕ ವಾಹನಗಳನ್ನು ಬಳಸಿ ಎಂದು ಆಯುಕ್ತರು ಸಲಹೆ ನೀಡಿದರು.
