ಬೆಂಗಳೂರು,ಡಿ.24- ಇನ್ಸ್ಟಾಗ್ರಾಮ್ ಮೂಲಕ ಯುವತಿಯನ್ನು ಪರಿಚಯಿಸಿಕೊಂಡು ಪ್ರೀತಿಸುವಂತೆ ಪೀಡಿಸಿ, ಹಲ್ಲೆ ಮಾಡಿ, ಬಟ್ಟೆ ಹಿಡಿದು ಎಳೆದಾಡಿ ಕಿರುಕುಳ ನೀಡಿದ್ದ ಪಾಗಲ್ ಪ್ರೇಮಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ತಾಲ್ಲೂಕಿನ ಬಿಲ್ಲಮಾರನಹಳ್ಳಿ ಗ್ರಾಮದ ನಿವಾಸಿ ನವೀನ್‌ಕುಮಾರ್ (29) ಬಂಧಿತ ಆರೋಪಿ. ಈತ ಪಿಯುಸಿ ವ್ಯಾಸಂಗ ಮಾಡಿದ್ದು, ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ. ಕಾಲ್‌ಸೆಂಟರ್ ಉದ್ಯೋಗಿಯಾಗಿರುವ ಯುವತಿಯನ್ನು ಇನ್ಸ್ಟಾಗ್ರಾಮ್ ಮೂಲಕ ನವೀನ್‌ಕುಮಾರ್ ಪರಿಚಯಿಸಿಕೊಂಡು ತನ್ನನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಾನೆ.
ಆಕೆ ಎಲ್ಲಿ ಹೋದರೂ ಹಿಂಬಾಲಿಸಿಕೊಂಡು ಹೋಗಿ ಪ್ರೀತಿಸುವಂತೆ ಪೀಡಿಸುತ್ತಿದ್ದನಲ್ಲದೆ, ಕಲ್ಲಿನಿಂದ ಹೊಡೆಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದನು.
ಡಿ.22 ರಂದು ಮಧ್ಯಾಹ್ನ 3.20 ರ ಸುಮಾರಿನಲ್ಲಿ ಯುವತಿ ತನ್ನ ಪಿಜಿ ಬಳಿ ನಡೆದುಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಹೋಗಿ ಆಕೆ ಧರಿಸಿದ್ದ ಬಟ್ಟೆ ಹಿಡಿದು ಎಳದಾಡಿ ಕಿರುಕುಳ ನೀಡಿ ಅಲ್ಲಿಂದ ಪರಾರಿಯಾಗಿದ್ದಾನೆ.ಯುವಕನ ವರ್ತನೆಯಿಂದ ನೊಂದ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕೇವಲ 24 ಗಂಟೆಯೊಳಗಾಗಿ ಆರೋಪಿ ನವೀನ್‌ಕುಮಾರ್‌ನನ್ನು ಬಂಧಿಸುವಲ್ಲಿ ಇನ್‌್ಸಪೆಕ್ಟರ್ ರವಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
