ಬೆಂಗಳೂರು,ಡಿ.10-ರಸ್ತೆ ಬದಿ ಬ್ಲಿಕಿಂಗ್ ಲೈಟ್ ಹಾಕದೆ ನಿಲ್ಲಿಸಿದ್ದ ಕ್ಯಾಂಟರ್ ವಾಹನಕ್ಕೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಫುಡ್ ಡೆಲಿವರಿ ಬಾಯ್ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೂಲತಃ ಕೊಪ್ಪಳದ ದಿಲೀಪ್‌ಕುಮಾರ್ (34) ಮೃತಪಟ್ಟ ಫುಡ್ ಡೆಲಿವರಿ ಬಾಯ್. ಈತ ಬಿಕಾಂ ಪದವೀಧರ.ನಗರದ ಭಾರತಿನಗರದಲ್ಲಿ ವಾಸವಾಗಿದ್ದ ದಿಲೀಪ್‌ಕುಮಾರ್ ಅವರು ಇಂದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಬಾಗಲೂರು ರಸ್ತೆ ರೇವಾ ಜಂಕ್ಷನ್, ಕಂಟ್ರಿಕ್ಲಬ್ ಸಮೀಪ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಂಟರ್ ವಾಹನ ಗಮನಕ್ಕೆ ಬಾರದೇ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡರು.
ತಕ್ಷಣ ಸಾರ್ವಜನಿಕರು ಗಮನಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಸುದ್ದಿ ತಿಳಿದು ಚಿಕ್ಕಜಾಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
