Wednesday, December 3, 2025
Homeಬೆಂಗಳೂರುಒಂದೇ ವರ್ಷದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ದಿವಾಳಿಯಾಗಲಿದೆ ; ಎನ್‌.ಆರ್‌.ರಮೇಶ್‌

ಒಂದೇ ವರ್ಷದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ದಿವಾಳಿಯಾಗಲಿದೆ ; ಎನ್‌.ಆರ್‌.ರಮೇಶ್‌

Greater Bengaluru Authority (GBA) will go bankrupt in a single year; N.R.Ramesh

ಬೆಂಗಳೂರು,ಡಿ.1- ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ವಿವಿಧ ಮೂಲಗಳಿಂದ ಸಂಗ್ರಹವಾಗುವ ಆದಾಯದ ಶೇ.60ರಷ್ಟು ಪಾಲನ್ನು ಅಲ್ಲಿನ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ವಿನಿಯೋಗಿಸಬೇಕಾದ ಸನ್ನಿವೇಶ ಇರುವುದಿರಂದ 5 ಪಾಲಿಕೆಗಳು ಒಂದೇ ವರ್ಷದಲ್ಲಿ ದಿವಾಳಿಯಾಗಲಿವೆ ಎಂದು ಬಿಜೆಪಿ ನಾಯಕ ಎನ್‌.ಆರ್‌.ರಮೇಶ್‌ ಎಚ್ಚರಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು ಇಂತಹ ಅಸಮತೋಲನ ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜಿಬಿಎ ವ್ಯಾಪ್ತಿಯ 17 ಇಲಾಖೆಗಳಿಗೆ ಸಂಬಂಧಿಸಿದ ನಿರ್ವಹಣೆ ಕಾರ್ಯಗಳಿಗೆ ಅಗತ್ಯವಿರುವ ಅನುದಾನಗಳನ್ನು ಕ್ರೋಢೀಕರಿಸಲು ಸಾಧ್ಯವಾಗದೇ ಕೇವಲ ಒಂದೇ ವರ್ಷದಲ್ಲಿ ಐದು ಪಾಲಿಕೆಗಳು ಆರ್ಥಿಕ ಅವನತಿಗೆ ತಲುಪಿ ದಿವಾಳಿಯಾಗುತ್ತದೆ ಎಂಬ ಅಂಕಿ – ಅಂಶಗಳ ಬಗ್ಗೆ ಸಿದ್ಧರಾಮಯ್ಯನವರ ಸರ್ಕಾರ ನಿಜಕ್ಕೂ ಗಮನ ಹರಿಸಿಲ್ಲ ಎಂಬ ಸತ್ಯ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ ಎಂದು ಅವರು ಆರೋಪಿಸಿದ್ಧಾರೆ.

ಈ ಹಿಂದಿನ 198 ವಾರ್ಡುಗಳನ್ನು ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗಿಂತಲೂ ಸಣ್ಣ ಪ್ರಮಾಣದ 369 ವಾರ್ಡುಗಳನ್ನಾಗಿ ವಿಂಗಡಿಸಿರುವುದರಿಂದಾಗಿ ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರು ಮಹಾನಗರದ ಐದು ಪಾಲಿಕೆಗಳು ಎಲ್ಲಾ ರೀತಿಯಿಂದಲೂ ದಿವಾಳಿಯ ಅಂಚಿನತ್ತ ಸಾಗಿ ವಿಶ್ವದ ಮುಂದೆ ನಗೆಪಾಟಲಿಗೀಡಾಗಲಿದೆ ಎಂದಿದ್ದಾರೆ.

ಬಿಬಿಎಂಪಿಯ 17 ಇಲಾಖೆಗಳಲ್ಲಿ ಒಟ್ಟು 2,818 ಮಂದಿ ಅಧಿಕಾರಿ, ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಹೊಸದಾಗಿ ರಚನೆಯಾದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳಲ್ಲೂ ಸಹ ಅವರುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರುಗಳ ಪೈಕಿ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಮೌಲ್ಯಮಾಪಕರು, ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರ ಸಂಖ್ಯೆ 8582 ರಷ್ಟಿದೆ.ಆರೋಗ್ಯ ಇಲಾಖೆಯಲ್ಲಿ ಒಟ್ಟು – 4293, ಇಂಜಿನಿಯರಿಂಗ್‌ ಇಲಾಖೆಯಲ್ಲಿ 5434, ಹಣಕಾಸು ಇಲಾಖೆಯಲ್ಲಿ 185 ಇನ್ನುಳಿದಂತೆ ಇರುವ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸಂಖ್ಯೆ ಒಟ್ಟು 970 ಇದೆ.

2,818 ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಹಾಗೂ ನೌಕರರ ಪಿಂಚಿಣಿಗೆಂದು ವರ್ಷಕ್ಕೆ ಸರಾಸರಿ 1,176 ಕೋಟಿ ರೂ.ಬೇಕು. ಇನ್ನುಳಿದಂತೆ, 17,000 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಪ್ರತೀ ತಿಂಗಳು ಸರಿಸುಮಾರು 37 ಕೋಟಿ ರೂ. ಹಾಗೆಯೇ, ಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಿಕೊಂಡಿರುವ ಇಂಜಿನಿಯರ್‌ಗಳಿಗೆ ಸರಾಸರಿ 4 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
ಇದೀಗ ಜಿಬಿಎ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ಕಂದಾಯ ಇಲಾಖೆಗೆ 1,4822, ಆರೋಗ್ಯ ಇಲಾಖೆಗೆ ಕನಿಷ್ಠ 1,0633, 1,0474 ಎಂಜಿನಿಯರ್‌ಗಳು, ಹಣಕಾಸು ಇಲಾಖೆಗೆ 305, ಇತರ ಇಲಾಖೆಗಳಿಗೆ 2,704 ಸೇರಿದಂತೆ ಒಟ್ಟು 6,326 ಮಂದಿ ಅಧಿಕಾರಿ ಹಾಗೂ ನೌಕರರು ಬೇಕಾಗುತ್ತಾರೆ. ಇವರಿಗೆ ವರ್ಷಕ್ಕೆ 3,000 ಕೋಟಿ ರೂ. ಬೇಕಾಗುತ್ತದೆ ಇದರ ಜೊತೆಗೆ, 17,000 ಮಂದಿ ಪೌರಕಾರ್ಮಿಕರ ವೇತನಕ್ಕೆಂದು ವರ್ಷಕ್ಕೆ 444 ಕೋಟಿ ಗುತ್ತಿಗೆ ಆಧಾರಿತ ಎಂಜಿನಿಯರ್‌ಗಳಿಗೆಂದು 48 ಕೋಟಿ ರೂ. ಸೇರಿ ವರ್ಷಕ್ಕೆ 3,492 ಕೋಟಿ ರೂ. ಗಳಷ್ಟು ಹಣವನ್ನು ವೆಚ್ಛ ಮಾಡಲೇಬೇಕಾಗುತ್ತದೆ.

ಜಿಬಿಎ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿರುವ ಆಸ್ತಿ ತೆರಿಗೆ 4,500 ಕೋಟಿ ರೂ, ನಕ್ಷೆ ಮಂಜೂರಾತಿ ಶುಲ್ಕದಿಂದ 1,200 ಕೋಟಿ ರೂ, ರಸ್ತೆ ಅಗೆತದ ಶುಲ್ಕದಿಂದ 150 ಕೋಟಿ ಸೇರಿ 5,850 ಕೋಟಿ ರೂ. ಸಂಗ್ರಹವಾಗುತ್ತಿದೆ.

ಜಿಬಿಎ ಸಿಬ್ಬಂದಿಗಳ 3,492 ಕೋಟಿ ರೂ.ಗಳ ಖರ್ಚಿನ ಜೊತೆಗೆ ಇತರ ಕಾರ್ಯ ನಿರ್ವಹಣೆಗೆ ವರ್ಷಕ್ಕೆ 1,700 ಕೋಟಿ ಸೇರಿ ಬರೊಬ್ಬರಿ 6,300 ಕೋಟಿ ರೂ ವೆಚ್ಛ ಮಾಡಬೇಕಾಗುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ನಯಾಪೈಸೆ ಉಳಿಯುವುದಿಲ್ಲ ಎಂದು ಅವರು ಲೆಕ್ಕ ಹಾಕಿದ್ದಾರೆ.

ನಗರದ 1,980 ಕಿ. ಮೀ. ಉದ್ದರ ಪ್ರಮುಖ ರಸ್ತೆಗಳು, 13,400 ಕಿ. ಮೀ. ಉದ್ದದ ವಾರ್ಡ್‌ ಮಟ್ಟದ ರಸ್ತೆಗಳು, 842 ಕಿ. ಮೀ. ಉದ್ದದ ಬೃಹತ್‌ ನೀರುಗಾಲುವೆಗಳ ಅಭಿವೃದ್ಧಿ ಮತ್ತು ಹೂಳೆತ್ತಲು, 183 ಕೆರೆಗಳು, 26 ಹೆರಿಗೆ ಆಸ್ಪತ್ರೆಗಳು, ಆರು ರೆಫರಲ್‌ ಆಸ್ಪತ್ರೆಗಳು ಮತ್ತು 144 ಪ್ರಾಥಮಿಕ ಆರೋಗ್ಯ ಕೇಂದ್ರಳು, ಅರಣ್ಯೀಕರಣ, ಮರಗಳ ತೆರವುಗೊಳಿಸುವಿಕೆ, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಕಾರ್ಯಗಳಿಗೆ ಬೇಕಾಗುವ 6,000 ಕೋಟಿ ರೂ. ಎಲ್ಲಿಂದ ತರುವುದು ಎಂದು ರಮೇಶ್‌ ಪ್ರಶ್ನಿಸಿದ್ದಾರೆ.

RELATED ARTICLES

Latest News