ಬೆಂಗಳೂರು,ಡಿ.27- ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದು ಕತ್ತರಿಯಿಂದ ಪತ್ನಿಯ ಕುತ್ತಿಗೆಗೆ ಮನಬಂದಂತೆ ಚುಚ್ಚಿ ಭೀಕರ ವಾಗಿ ಕೊಲೆ ಮಾಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಗ್ರಹಾರ ಲೇಔಟ್ ನಿವಾಸಿ ಆಯಿಷಾ ಸಿದ್ದಿಕಿ (34) ಕೊಲೆಯಾದ ಬ್ಯೂಟಿಷಿಯನ್.
ಮೆಕ್ಯಾನಿಕ್ ವೃತ್ತಿ ಮಾಡುವ ಸೈಯದ್ ಜಬಿ (42) ಕಳೆದ ಮೂರು ತಿಂಗಳ ಹಿಂದೆಯಷ್ಟೇ ಆಯಿಷಾ ಅವರನ್ನು ಮದುವೆಯಾಗಿದ್ದು, ಆತನಿಗೆ ಇವರು ಎರಡನೇ ಪತ್ನಿ.ಆಯಿಷಾ ಅವರು ಬ್ಯೂಟಿಷಿಯನ್. ಬ್ಯೂಟಿಪಾರ್ಲರ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ನಿನ್ನೆ ಮುಂಜಾನೆ 3 ಗಂಟೆ ಸುಮಾರಿನಲ್ಲಿ ದಂಪತಿ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಜಗಳವಾಗಿದೆ.
ಈ ಜಗಳ ಬೆಳಗ್ಗೆವರೆಗೂ ನಡೆದಿದ್ದು 8 ಗಂಟೆ ಸುಮಾರಿನಲ್ಲಿ ಬಟ್ಟೆ ಕತ್ತರಿಸುವ ಕತ್ತರಿಯಿಂದ ಆಯಿಷಾ ಕುತ್ತಿಗೆಗೆ ಮೂರ್ನಾಲ್ಕು ಬಾರಿ ಮನಬಂದಂತೆ ಚುಚ್ಚಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಸುದ್ದಿ ತಿಳಿದು ಸಂಪಿಗೆಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.ಆರೋಪಿ ಸೈಯದ್ ಜಬಿಯನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
