ಬೆಂಗಳೂರು, ಡಿ.21- ಸ್ವಯಂ ಅಪಘಾತದಲ್ಲಿ ಸಾಫ್ಟ್ ವೇರ್ ಕಂಪನಿ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಹುಳಿಮಾವು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಮನಹಳ್ಳಿ ನಿವಾಸಿ ಮುನಿಸ್ವಾಮಿ (31) ಅಪಘಾತದಲ್ಲಿ ಮೃತಪಟ್ಟ ಸಾಫ್ಟ್ ವೇರ್ ಕಂಪನಿ ಉದ್ಯೋಗಿ. ಇವರು ಮೂಲತಃ ತಮಿಳುನಾಡಿನ ಧರ್ಮಪುರಿಯವರು. ನಿನ್ನೆರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಬೈಕ್ನಲ್ಲಿ ಮನೆಗೆ ಮುಂಜಾನೆ 1.30ರ ಸಮಯದಲ್ಲಿ ಹುಳಿಮಾವು ಕೆರೆ ರಸ್ತೆಯಲ್ಲಿ ಕೋದಂಡರಾಮ ದೇವಸ್ಥಾನದ ಮುಂಭಾಗ ಬರುತ್ತಿದ್ದಾಗ ಸ್ಕಿಡ್ ಆಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ತಕ್ಷಣ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಸೆಂಟ್ಜಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಲಾಗಿದೆ.
ಅಪಘಾತಕ್ಕೆ ಅತಿವೇಗ ಹಾಗೂ ಅಜಾಗರೂಕತೆಯೇ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಸಂಚಾರಿ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
