ಬೆಂಗಳೂರು, ಡಿ.13- ಮನೆಯ ಬಾಲ್ಕನಿಯಲ್ಲಿ ಏರ್‌ಗನ್ ಅಭ್ಯಾಸ ಮಾಡುತ್ತಿದ್ದ ವೇಳೆ ಆಕಸಿಕವಾಗಿ ಉದ್ಯಮಿಯೊಬ್ಬರಿಗೆ ತಗುಲಿದ್ದು, ಈ ಸಂಬಂಧ ಕಾನೂನು ವಿದ್ಯಾರ್ಥಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣರಾವ್ ಪಾರ್ಕ್ ಬಳಿಯ ನಿವಾಸಿ ಮೊಹಮದ್ ಅಫ್ಜಲ್ ಬಂಧಿತ ಆರೋಪಿ. ಈತ ನಗರದ ಕಾನೂನು ಕಾಲೇಜೊಂದರಲ್ಲಿ ಅಂತಿಮ ವರ್ಷದ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾನೆ. ಡಿ.10 ರಂದು ರಾತ್ರಿ ಬಾರ್‌ಗಳ ಮಾಲೀಕ ರಾಜಗೋಪಾಲ್ ಎಂಬುವವರು ಎಂದಿನಂತೆ ಸ್ನೇಹಿತರೊಂದಿಗೆ ಕೃಷ್ಣರಾವ್ ಪಾರ್ಕ್‌ನಲ್ಲಿ ವಾಯುವಿಹಾರ ಮಾಡುತ್ತಿದ್ದರು.
ಆ ಸಮಯದಲ್ಲಿ ಪಾರ್ಕ್ ಬಳಿಯ ನಿವಾಸಿ ಅಫ್ಜಲ್ ಏರ್‌ಗನ್ ಅಭ್ಯಾಸ ಮಾಡುತ್ತಿದ್ದಾಗ ಆಕಸಿಕವಾಗಿ ಗುಂಡು ರಾಜಗೋಪಾಲ ಅವರ ಕುತ್ತಿಗೆಗೆ ಹೊಕ್ಕಿ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಜೊತೆಯಲ್ಲಿದ್ದ ಸ್ನೇಹಿತರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದು ಬಸವನಗುಡಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಘಟನಾ ಸ್ಥಳದ ಸುತ್ತಾಮುತ್ತಲಿನಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಪಾರ್ಕ್ ಸಮೀಪದ ಮನೆಯಿಂದ ಗುಂಡು ಹಾರಿರುವುದು ಗೊತ್ತಾಗಿದೆ.ಆ ಮನೆಯ ಬಳಿ ಹೋಗಿ ವಿಚಾರಿಸಿದಾಗ, ಕಾನೂನು ವಿದ್ಯಾರ್ಥಿ ಅಫ್ಜಲ್ ಮನೆಯೊಳಗೆ ಏರ್‌ಗನ್‌ನಿಂದ ಶೂಟಿಂಗ್ ಅಭ್ಯಾಸದ ವೇಳೆ ಗುರಿ ತಪ್ಪಿ ಕಿಟಕಿಯಿಂದ ಗುಂಡು ಹೊರ ಹೋಗಿದೆ ಎಂದು ಆತ ಹೇಳಿದ್ದಾನೆ.
ರಾಜಗೋಪಾಲ ಅವರು ಎರಡು ಬಾರ್‌ಗಳನ್ನು ನಡೆಸುತ್ತಿದ್ದು, ಅವರಿಗೆ ಯಾರಿಂದಲೂ ಜೀವ ಬೆದರಿಕೆ ಇಲ್ಲದಿರುವುದು ತನಿಖೆಯಿಂದ ಗೊತ್ತಾಗಿದೆ.ಹಾಗಾಗಿ ಇದು ಆಕಸಿಕವಾಗಿ ನಡೆದಿರುವ ಘಟನೆ ಎಂಬುವುದು ಸದ್ಯಕ್ಕೆ ತಿಳಿದುಬಂದಿದ್ದು, ಪೊಲೀಸರು ಅಫ್ಜಲ್‌ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
