ಬೆಂಗಳೂರು, ಜ.25- ಸ್ಕೂಟಿಯಲ್ಲಿ ತಾಯಿಯನ್ನು ಕರೆದುಕೊಂಡು ಮಗಳು ಹೋಗುತ್ತಿದ್ದಾಗ ಕಾರು ತಾಗಿದ ಪರಿಣಾಮ ನಿಯಂತ್ರಣ ತಪ್ಪಿ, ಕೆಳಗೆ ಬಿದ್ದ ತಾಯಿ ಮೇಲೆಯೇ ಕಾರು ಹರಿದ ಪರಿಣಾಮ ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಬೂಸಾಬ್ ಪಾಳ್ಯದ ನಿವಾಸಿ ಅರುಣಾ (42) ಮೃತಪಟ್ಟ ಮಹಿಳೆ. ಮಗಳು ನಂದಿನಿ ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂದಿನಿ ಸಾಫ್್ಟವೇರ್ ಇಂಜಿನಿಯರ್ ಆಗಿದ್ದರೆ, ಅರುಣಾ ಅವರು ಗೃಹಿಣಿ. ನಿನ್ನೆ ಸಂಜೆ 3.30ರ ಸಮಾರಿನಲ್ಲಿ ತಾಯಿಯನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೆಬ್ಬಾಳಕ್ಕೆ ನಂದಿನಿ ಹೋಗುತ್ತಿದ್ದರು.
ರಿಂಗ್ ರಸ್ತೆಯ ಹೆಣ್ಣೂರು ಜಂಕ್ಷನ್ ಅಂಡರ್ ಪಾಸ್ನಲ್ಲಿ ಹೋಗುತ್ತಿದ್ದಾಗ ಪಕ್ಕದಲ್ಲಿ ವೇಗವಾಗಿ ಬಂದ ಕಾರು ಇವರ ಸ್ಕೂಟರ್ಗೆ ತಾಗಿದೆ. ಪರಿಣಾಮ ನಿಯಂತ್ರಣ ತಪ್ಪಿ ತಾಯಿ-ಮಗಳು ಇಬ್ಬರೂ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಕಾರು ಅರುಣಾ ಅವರ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಬಾಣಸವಾಡಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅರುಣಾ ಅವರ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ, ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
