ಬೆಂಗಳೂರು,ಡಿ.22- ನಗರದ ನಾಗರಿಕರು ಹೊಸವರ್ಷದ ಸಂಭ್ರಮಾಚರಣೆಯನ್ನು ಜಾಗೃತಿ, ಕಾಳಜಿ ಮತ್ತು ಸುರಕ್ಷತೆಯೊಂದಿಗೆ ಜವಾಬ್ದಾರಿಯುತವಾಗಿ ಆಚರಿಸುವಂತೆ ನಗರ ಪೊಲೀಸರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರೇಟ್ ರೆಸ್ಪಾಸಿಬ್ಲಿ (ಜವಾಬ್ದಾರಿಯಿಂದ ಆಚರಿಸೋಣ) ಎಂಬ ಶೀರ್ಷಿಕೆಯಡಿ ಅಭಿಯಾನವನ್ನು ಇಂದು ಆರಂಭಿಸಿರುವ ನಗರ ಪೊಲೀಸ್ ಆಯುಕ್ತರು ಮತ್ತು ಇಲಾಖೆಯ ಇತರೆ ಅಧಿಕಾರಿಗಳು ನಾಗರಿಕರ ಸುರಕ್ಷತೆಗಾಗಿ ಕೆಲವು ಸಲಹಾ ಸೂಚನೆಗಳನ್ನು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಈ ಬಗ್ಗೆ ಮಾಹಿತಿ ನೀಡಿ,ನಗರದ ಎಲ್ಲಾ ನಾಗರಿಕರು ಸಂಪೂರ್ಣವಾಗಿ ಸಹಕರಿಸಬೇಕು. ಮತ್ತು ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳು ನೀಡುವ ಮಾರ್ಗಸೂಚಿಗಳು, ಸಲಹಾ ಸೂಚನೆಗಳನ್ನು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.
ಜನ ದಟ್ಟಣೆ ಉಂಟಾದ ಸಂದರ್ಭದಲ್ಲಿ ಮೀಸಲಿಟ್ಟ ಸ್ಥಳದಲ್ಲಿ ಅವರುಗಳನ್ನು ತಡೆದು ಕಾಯ್ದಿರಿಸುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.ಅವಧಿ ಮೀರಿದ ಸಂದರ್ಭದಲ್ಲಿ ಸಾರ್ವಜನಿಕರು ತಮ ಮನೆಗಳಿಗೆ ಹಿಂತಿರುಗಲು ನಮ ಮೆಟ್ರೋದ ಅವಧಿಯನ್ನು ವಿಸ್ತರಿಸಲಾಗಿದೆ. ಬಸ್, ಆಟೋರಿಕ್ಷಾ ಮತ್ತು ಕ್ಯಾಬ್‌ಗಳ ಸಂಖ್ಯೆಗಳನ್ನು ಸಹ ಹೆಚ್ಚಿಸಲಾಗುವುದು.
ನಿಷೇದಿತ ಮಾದಕ ವಸ್ತುಗಳ ಮತ್ತು ನಾರ್ಕೋಟಿಕ್ ಪದಾರ್ಥಗಳ ಬಳಕೆಯು ನಿಷಿದ್ದವಾಗಿದ್ದು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತು ಸೇವನೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನಾಗರಿಕರು ಮದ್ಯಪಾನ ಮಾಡಿ ವಾಹನ ಚಲಾಯಿಸುವ ಯೋಜನೆ ಹೊಂದಿದ್ದರೆ, ಸಾರ್ವಜನಿಕ ಸಾರಿಗೆ ಅಥವಾ ಕ್ಯಾಬ್ ಸೇವೆ ಬಳಸುವುದರೊಂದಿಗೆ ಸಂಚಾರ ವ್ಯವಸ್ಥೆಗಳನ್ನು ಗೌರವಿಸಬೇಕು.ರಸ್ತೆಗಳಲಿ ವೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಅಶಾಂತಿಯನ್ನು ಉಂಟು ಮಾಡದಂತೆ ಸೂಚಿಸಲಾಗಿದೆ.
ಮಹಿಳೆಯರ ಸುರಕ್ಷತೆ ಪ್ರಮುಖ ಆಧ್ಯತೆ:
ಮಹಿಳೆಯರ ಸುರಕ್ಷತೆಯು ಇಲಾಖೆಯ ಪ್ರಮುಖ ಆಧ್ಯತೆಯಾಗಿದ್ದು, ಜನ ಸಂಚಾರ ಹೆಚ್ಚಿರುವ ಮತ್ತು ಸಂವೇದನಾಶೀಲ ಪ್ರದೇಶಗಳಲ್ಲಿ ತಕ್ಷಣದ ಸಹಾಯ ಪಡೆಯಬೇಕಾದರೆ ಕೆಎಸ್‌ಪಿ ಆಪ್ ಡೌನ್‌ಲೋಡ್ ಮಾಡಿಕೊಂಡು, ಎಸ್‌ಓಎಸ್ ಪ್ಯೂಚರ್‌ರಸ ಬಳಸುವಂತೆ ಪ್ರೋತ್ಸಾಹಿಸುವುದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ, ವಿಷೇಶವಾಗಿ ಚೆನ್ನಮ ಪಡೆಯನ್ನು ಸಹ ನಿಯೋಜಿಸಲಾಗಿದೆ.
ತಕ್ಷಣ ಸ್ಪಂದನೆ:
ನಮ 112 ಗೆ ಕರೆ ಮಾಡಿದಾಗ ತಕ್ಷಣವೆ ಸಮೀಪದ ಪ್ರತಿಕ್ರಿಯಾ ಘಟಕಕ್ಕೆ ತಲುಪಿ ನಗರದಲ್ಲಿ ಎಲ್ಲಾ ಕಡೆಯೂ ವೇಗವಾಗಿ ಸಹಾಯ ದೊರಕುತ್ತದೆ.ಈ ಕರೆಗಳು ನಮ ಹೊಯ್ಸಳ ಸಿಬ್ಬಂದಿಯೊಂದಿಗೆ ಸಮನ್ವಯವಾಗಿದ್ದು, ವೇಗವಾಗಿ ಸಹಾಯವನ್ನು ಖಚಿತಪಡಿಸುತ್ತವೆ.
ಹೊಸ ವರ್ಷದ ಅವಧಿಯಲ್ಲಿ ತುರ್ತು ಸೇವೆಗಳು ದಿನದ 24 ಗಂಟೆಗಳು ಲಭ್ಯವಿರುತ್ತದೆ. ಪ್ರತಿಯೊಬ್ಬರು ತಮ ಮೊಬೈಲ್‌ಗಳಲ್ಲಿ 112 ನಂಬರನ್ನು ಬಳಸುವುದು ಹಾಗೂ ತಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳುವಂತೆ ಕೋರಿದ್ದಾರೆ.
ಈ ಅವಧಿಯಲ್ಲಿ ಹೆಚ್ಚುವರಿ ಗಸ್ತನ್ನು ಸಹ ಬಲಪಡಿಸಲಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದಲ್ಲದೇ ಹೊಸ ತಂತ್ರಜ್ಞಾನದ ವ್ಯವಸ್ಥೆಯಾದ ಎಐ ಬಳಸಿ ನಿಗಾವಣೆ ವಹಿಸಲಾಗುವುದು. ಹೊಸ ವರ್ಷದ ಸಂಭ್ರಮಾಚರಣೆಗಳಿಗೆ ಸಂಬಂಧಿಸಿದ ವ್ಯವಸ್ಥೆ ಹಾಗೂ ಸಲಹೆ ಸೂಚನೆಗಳ ಕುರಿತ ಅಪ್‌ಡೇಟ್‌ಗಳಿಗಾಗಿ ಮಾರ್ಗಸೂಚಿಗಳನ್ನು ಒಳಗೊಂಡ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡುವ ಮೂಲಕ ವೆಬ್‌ಸೈಟನ್ನು ನಿರಂತರವಾಗಿ ಪರಿಶೀಲಿಸುವಂತೆ ಆಯುಕ್ತರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ರೇವಾ ಪಾರ್ಟಿ ನಿಷಿದ್ಧ:
ಹೊಸವರ್ಷಾಚರಣೆ ವೇಳೆ ರೇವಾ ಪಾರ್ಟಿಗಳನ್ನು ಆಯೋಜಿಸಲು ಬಿಡುವುದಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಒಂದು ವೇಳೆ ಅಂತಹ ಪಾರ್ಟಿಗಳನ್ನು ಆಯೋಜನೆ ಮಾಡಿರುವುದು ಕಂಡು ಬಂದಲ್ಲಿ ಆಯೋಜಕರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಡಿ.31 ರಂದು ರಾತ್ರಿ ನಗರದ ಎಲ್ಲಾ ಕಡೆ ಪೊಲೀಸರು ಕರ್ತವ್ಯದಲ್ಲಿರುತ್ತಾರೆ. ವಾಹನ ಸವಾರರು ಒಂದು ವೇಳೆ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಅಂತಹ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆಂದು ಅವರು ಇದೇ ವೇಳೆ ತಿಳಿಸಿದ್ದಾರೆ.
Read This : ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ
