ಬೆಂಗಳೂರು,ಜ.13- ಎಂಟತ್ತು ಮಂದಿ ದುಷ್ಕರ್ಮಿಗಳು ಗುಜರಿ ವ್ಯಾಪಾರಿಯನ್ನು ಆಟೋದಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಗುಜರಿ ವ್ಯಾಪಾರಿ ಸಬೀರ್ (29) ಕೊಲೆಯಾದ ಯುವಕ. ಈತ ನಿವೃತ್ತ ಎಎಸ್‌ಐ ಪುತ್ರ.
ಹೊಸರೋಡ್‌ನಲ್ಲಿ ಗುಜರಿ ವ್ಯಾಪಾರ ಮಾಡಿಕೊಂಡು ಸಬೀರ್ ವಾಸವಾಗಿದ್ದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಬಂಧಿಯೊಬ್ಬರು ಚಿಕಿತ್ಸೆಗೆ ದಾಖಲಾಗಿದ್ದರಿಂದ ಅವರನ್ನು ನೋಡಿಕೊಂಡು ಸಬೀರ್ ರಾತ್ರಿ 10.45 ರ ಸುಮಾರಿನಲ್ಲಿ ಸ್ನೇಹಿತರ ಜೊತೆ ಆಟೋದಲ್ಲಿ ಮನೆಗೆ ಹಿಂದಿರುಗುತ್ತಿದ್ದರು.
ಅದೇ ಸಮಯಕ್ಕಾಗಿ ಕಾಯುತ್ತಿದ್ದ ಎಂಟತ್ತು ಮಂದಿ ದುಷ್ಕರ್ಮಿಗಳು ಆಟೋ ಹಾಗೂ ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದು ಮಂಗಮನಪಾಳ್ಯದ ಪೆಟ್ರೋಲ್ ಬಂಕ್ ಬಳಿ ಆಟೋ ಅಡ್ಡಗಟ್ಟಿ ಸಬೀರ್‌ನನ್ನು ಹೊರಗೆಳೆದುಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಬಂಡೆಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಹಳೆ ದ್ವೇಷದಿಂದ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಶೋಧ ಮುಂದುವರೆಸಿದ್ದಾರೆ.
