ಬೆಂಗಳೂರು,ಡಿ.24- ಸಾಫ್ಟ್ ವೇರ್ ಎಂಜಿನಿಯರ್ ಗಳನ್ನು ಮೋಹದ ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡುತ್ತಿದ್ದ ಇಬ್ಬರು ಯುವತಿಯರು ಸೇರಿದಂತೆ ಐದು ಮಂದಿಯ ಗ್ಯಾಂಗ್ ಅನ್ನು ಆರ್‌ಆರ್‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟೆಕ್ಕಿಯೊಬ್ಬರು ಯುವತಿ ಬೇಕೆಂದು ಆನ್‌ಲೈನ್ ಟೆಲಿಗ್ರಾಂನ ಗ್ರೂಪ್‌ವೊಂದರಲ್ಲಿ ಬುಕ್ ಮಾಡಿದ್ದಾರೆ. ಡಿ.1 ರಂದು ಯುವತಿ ನೀಡಿದ ಆರ್‌ಆರ್‌ನಗರದ ವಿಳಾಸಕ್ಕೆ ಆತ ಹೋದಾಗ ಯುವತಿ ಆತನಿಗೆ ಹೆದರಿಸಿ 20 ಸಾವಿರ ಹಣ ಹಾಗೂ ಮೊಬೈಲ್ ಕಿತ್ತುಕೊಂಡಿದ್ದಲ್ಲದೆ 1 ಲಕ್ಷ ರೂ. ಹಣ ಕೊಡುವಂತೆ ಪೀಡಿಸಿದ್ದಾಳೆ.
ಇದರಿಂದ ಹೆದರಿದ ಟೆಕ್ಕಿ ಮೊಬೈಲ್ ವಾಪಸ್ ಪಡೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.ಇಷ್ಟಾದರೂ ಬುದ್ಧಿ ಕಲಿಯದ ಆತ ಮತ್ತೆ ಟೆಲಿಗ್ರಾಂ ಮೂಲಕ ಮತ್ತೊಬ್ಬ ಯುವತಿಯನ್ನು ಬುಕ್ ಮಾಡಿದ್ದಾನೆ. ಆ ಯುವತಿಯ ವಿಳಾಸವೂ ಸಹ ಆರ್‌ಆರ್‌ನಗರದ್ದೇ ಆಗಿದೆ. ಡಿ.20 ರಂದು ಆ ವಿಳಾಸಕ್ಕೆ ಹೋದಾಗ ಅಲ್ಲಿದ್ದ ಯುವತಿ ಹಾಗೂ ಮೂವರು ಯುವಕರು ಸೇರಿಕೊಂಡು ಟೆಕ್ಕಿ ಮೇಲೆ ಹಲ್ಲೆ ನಡೆಸಿ 20 ಸಾವಿರ ರೂ. ಕಸಿದುಕೊಂಡಿದ್ದಾರೆ.
ನಂತರ 1 ಲಕ್ಷ ರೂ. ಹಣ ನೀಡುವಂತೆ ಹೆದರಿಸಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಿದ್ದಾಗ ಟೆಕ್ಕಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.ಸಾರ್ವಜನಿಕರು ಗಮನಿಸಿ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರ್‌ಆರ್‌ನಗರದಲ್ಲೇ ಇಬ್ಬರು ಯುವತಿಯರು ಸೇರಿದಂತೆ ಐದು ಮಂದಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
