ಬೆಂಗಳೂರು,ಡಿ.30- ಹೊಸವರ್ಷದ ಆಚರಣೆಗೆ ನಗರದ ಎಂಜಿ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹೊಸವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್ ಮತ್ತಿತರ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಕಲ್ಪಿಸಲಾಗಿದೆ ಎಂದು ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ತಿಳಿಸಿದ್ದಾರೆ.
ನಾಳೆ ರಾತ್ರಿ ಈ ಪ್ರಮುಖ ಪ್ರದೇಶಗಳಲ್ಲಿ ನಡೆಯಲಿರುವ ಹೊಸವರ್ಷಾಚರಣೆಗೆ ದೇಶ ವಿದೇಶಗಳಿಂದ ಜನ ಆಗಮಿಸುವ ಹಿನ್ನೆಲೆಯಲ್ಲಿ ವಂಶಿಕೃಷ್ಣ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಆ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಂಶಿಕೃಷ್ಣ ಅವರು, ಬ್ರಿಗೇಡ್ ರಸ್ತೆಯಲ್ಲಿ 360 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳಿದ್ದು, ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 6 ಸಾವಿರ ಹೆಚ್ಚುವರಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ವಂಶಿಕೃಷ್ಣ ಅವರು ತಿಳಿಸಿದರು.
ವರ್ಷಾಚರಣೆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ದುವರ್ತನೆ ತೋರುವ ಬಗ್ಗೆ ಸಾರ್ವಜನಿಕರಿಂದ ಕೆಲವು ಸಲಹೆ ಸೂಚನೆಗಳು ಬಂದಿರುವ ಹಿನ್ನೆಲೆಯಲ್ಲಿ ಈ ಭಾರಿ ಪೊಲೀಸರು ಅಂತಹವರ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಯಾರಾದರೂ ಹದ್ದು ಮೀರಿ ವರ್ತಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಸಿದರು.
ಘಟನಾ ಸ್ಥಳದಲ್ಲಿ ದುವರ್ತನೆ ತೋರುವವರ ವಿರುದ್ಧ ಸಾರ್ವಜನಿಕರು ಕ್ಯೂಆರ್‌ಕೋಡ್ ಮೂಲಕ ಪೊಲೀಸರಿಗೆ ದೂರು ನೀಡಬಹುದಾಗಿದೆ ಎಂದರು. ಸ್ಥಳದಲ್ಲಿ ಕಮಾಂಡ್ ಸೆಂಟರ್ ಕೂಡ ತೆರೆಯಲಾಗಿದೆ. ನಾಳೆ ರಾತ್ರಿ ನಗರದಲ್ಲಿರುವ ಫ್ಲೈಓವರ್‌ಗಳ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ರಾತ್ರಿ 1 ಗಂಟೆ ಒಳಗೆ ಪಬ್ ಮತ್ತು ಬಾರ್‌ಗಳನ್ನು ಮುಚ್ಚುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಹೀಗಾಗಿ ಯಾರೂ ಕಾನೂನು ಮೀರಿ ವರ್ತಿಸಬಾರದು ಎಂದು ವಂಶಿಕೃಷ್ಣ ಮನವಿ ಮಾಡಿಕೊಂಡಿದ್ದಾರೆ.
